ಶಿವಮೊಗ್ಗ : ಸಾಲದಲ್ಲಿಯೇ ಮುಳುಗಿ, ಸಾಲದಲ್ಲಿಯೇ ಏಳುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಎಂದು ಹೇಳುವ ಸಿದ್ದರಾಮಯ್ಯನವರು ಅವರು ಸಿಎಂ ಆದಾಗ ವಜ್ರ ವೈಢೂರ್ಯಗಳನ್ನ ರಸ್ತೆಯ ಮೇಲೆ ಮಾರಾಟ ಮಾಡಲಾಗುತ್ತಿತ್ತಾ? ಯಾರೂ ಮನೆಗೆ ಬೀಗ ಹಾಕಲಾಗುತ್ತಿರಲಿಲ್ಲ ? ವಿಜಯನಗರ ಸಾಮ್ರಾಜ್ಯವಾಗಿತ್ತಾ? ಈಗ ಮಾತ್ರ ಸಾಲ ಮಾಡಲಾಗುತ್ತಿದಿಯಾ..? ತಾನು ಮುಖ್ಯಮಂತ್ರಿಗಳಾಗಿದ್ದಾಗ ಒಂದು ರೂಪಾಯಿನೂ ಸಾಲ ಮಾಡಿಲ್ಲವೆಂದು ಹೇಳಲಿ ನೋಡೋಣ ಎಂದು ವಾಗ್ದಾಳಿ ಮಾಡಿದ್ದಾರೆ.
ಸರ್ಕಾರ ಎಂದಾಗ ಸಾಲ ಮಾಡೋದು ಇರುತ್ತದೆ, ಸಾಲ ತೀರಿಸೋದು ಇದ್ದೇ ಇರುತ್ತದೆ. ಸಿದ್ದರಾಮಯ್ಯನಿಗೆ ಪಾಠ ಮಾಡಲು ನಾನು ಎಲ್ ಕೆಜಿ ಟೀಚರ್ ಅಲ್ಲ. ಇಂತಹ ವ್ಯಕ್ತಿಗಳು ಆಗಿದ್ದರೇ ಯಾಕೆ ಚಾಮುಂಡೇಶ್ವರಿ ಕ್ಷೇತ್ರ ಸೋಲಬೇಕಿತ್ತು, ಸೋತ ಬಳಿಕ ಸಿದ್ದರಾಮಯ್ಯ ಬಹಳ ಪಾಠ ಹೇಳುವ ಕೆಲಸ ಮಾಡುತ್ತಿದ್ದಾರೆ. ಇವರ ಪಾಠವನ್ನು ರಾಜ್ಯದ ಜನತೆ ಒಪ್ಪುವುದಿಲ್ಲ.
ನಿಮ್ಮ ಅಧಿಕಾರದ ಅವಧಿಯಲ್ಲಿ ಮಾಡಬಾರದ ತಪ್ಪು ಮಾಡಿದ್ದೀರಾ ಅದಕ್ಕಾಗಿಯೇ ನಿಮ್ಮನ್ನು ಚಾಮುಂಡೇಶ್ವರಿ ಕ್ಷೇತ್ರದ ಜನರು ಸೋಲಿಸಿದ್ದಾರೆ. ಈಗ ನಿಮ್ಮ ಪಕ್ಷದ ಸಂಘಟನೆ ಮಾಡಿ. ವಿರೋಧ ಪಕ್ಷದವರಾಗಿ ಸರ್ಕಾರದ ತಪ್ಪು ಏನಂತಾ ತಿಳಿಸಿ ಕೋವಿಡ್ ಹೋಗುವವರೆಗೂ ತಡೆದುಕೊಂಡು ನಂತರ ಅದರ ಬಗ್ಗೆ ಬೇಕಾದರೆ ಹೋರಾಟ ಮಾಡಿ. ಪಾದಯಾತ್ರೆ ಮಾಡಿ ತಣ್ಣಗೆ ಮಲಗಿದ್ದ ಮಲ್ಲಿಕಾರ್ಜುನ್ ಖರ್ಗೆಗೆ ಕೋವಿಡ್ ಬರಿಸಿದ್ದಿರಾ. ಈಗ ಮೇಕೆದಾಟು ಪಾದಯಾತ್ರೆ ಬಿಟ್ಟು ಮಹದಾಯಿ ಹಿಡಿದುಕೊಂಡಿದ್ದಾರೆ. ಮಹದಾಯಿ ಹೋರಾಟ ನಮ್ಮ ಹೋರಾಟವೆಂದು ಸಿದ್ದರಾಮಯ್ಯ ಮತ್ತು ಡಿಕೆಶಿ ಎದೆ ಮುಟ್ಟಿಕೊಂಡು ಹೇಳಲಿ. ಈ ಹಿಂದೆ ಸೋನಿಯಾ ಗಾಂಧಿ ಅವರು ಗೋವಾ ಚುನಾವಣೆ ಸಂದರ್ಭದಲ್ಲಿ ಮಹದಾಯಿಯ ಒಂದು ಹನಿಯನ್ನೂ ಕರ್ನಾಟಕಕ್ಕೆ ನೀಡಲ್ಲ ಎಂದಿದ್ದರು. ಇದನ್ನ ಸಿದ್ದರಾಮಯ್ಯ ಮತ್ತು ಡಿಕೆಶಿ ಇಲ್ಲವೆಂದು ಹೇಳಲಿ ನೋಡೋಣ ಎಂದು ಸಿದ್ದರಾಮಯ್ಯ ವಿರುದ್ದ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.