Friday, November 1, 2024

ನೀವು ಮಾಡಿದ್ದನ್ನೇ ನಾವು ಮಾಡಿದ್ದೇವೆ; ಬಿಜೆಪಿಗೆ ಅಶೋಕ ಮಂದಾಲಿ ಟಾಂಗ್!

ಗದಗ: ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನವರು ಅಡ್ಡದಾರಿ ಹಿಡಿತಿದಾರೆ‌ ಅನ್ನೋ ಬಿಜೆಪಿ ಮುಖಂಡರು ಕಾಂಗ್ರೆಸ್ ಮೇಲೆ ಮಾಡುತ್ತಿರುವ ಆರೋಪಕ್ಕೂ ಮುನ್ನ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗರು ಹಿಡಿದಿದ್ದು ಯಾವ ಮಾರ್ಗ ಎಂಬುದನ್ನು ಹೇಳಲಿ ಎಂದು ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನಿಡಿರುವ ಅವರು, ದಾವಣಗೆರೆ ಮಹಾನಗರ ಪಾಲಿಕೆಗೆ ಕಾಂಗ್ರೆಸ್ 22 ಜನ, ಬಿಜೆಪಿಯವರು 17 ಜನ ಆಯ್ಕೆಯಾಗಿದ್ದರು. ಇವರೊಂದಿಗೆ ಪಕ್ಷೇತರರಾಗಿ ಐವರು, ಒಂದು ಜೆಡಿಎಸ್ ಗೆದ್ದಿದ್ದರು. ಓರ್ವ ಪಕ್ಷೇತರ, ಸ್ಥಳೀಯ ಶಾಸಕ, ವಿಧಾನ ಪರಿಷತ್ ಸದಸ್ಯರು ಸೇರಿ ಕಾಂಗ್ರೆಸ್ 23 ಬಲ ಹೆಚ್ಚಳಗೊಂಡು ಅಧಿಕಾರ ಹಿಡಿಯಬೇಕಿತ್ತು.ಆದರೆ, ಬಿಜೆಪಿಯವರು ಬೆಂಗಳೂರಿನಿಂದ ರವಿಕುಮಾರ, ತೇಜಸ್ವಿನಿಗೌಡ, ಲೇಹರಸಿಂಗ್, ನಂಜುಂಡಿ,ಚಿದಾನಂದಗೌಡ, ರಾಣೆಬೆನ್ನೂರಿನ ಆರ್. ಶಂಕರ ಸೇರಿ ಏಳು ಜನರನ್ನು ದಾವಣಗೆರೆಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ, ವಾಮಮಾರ್ಗದಿಂದ ಅಧಿಕಾರ ಪಡೆದುಕೊಂಡಿದ್ದಾರೆ.

ಗದಗನ ಬಿಜೆಪಿ ಮುಖಂಡರ ಹೇಳಿಕೆ ಇದ್ದಿಲು ಮಸಿಗೆ ಬುದ್ಧಿ ಹೇಳಿದಂತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ನಗರಸಭೆ ಚುನಾವಣೆಯಲ್ಲಿ ಗೆದ್ದಿರುವ ವಾರ್ಡ ನಂ.28, 24 ಹಾಗೂ 5 ರಲ್ಲಿ ಬಿಜೆಪಿಗರು ಗೆದ್ದಿದ್ದು ಅನ್ಯಾಯ ಮಾರ್ಗದಿಂದಲೇ ಅಲ್ಲವೇ ? 28ನೇ ವಾರ್ಡನಿಂದ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಈವರೆಗೆ ಲಿಂಗಾಯತ ಎಂದು ಬಿಂಬಿಸಿಕೊಂಡು ಬಂದು, ಇದೀಗ ಚುನಾವಣೆ ಹೊತ್ತಲ್ಲಿ ಗಾಣಿಗ ಎಂದು ಸರ್ಟಿಫಿಕೇಟ್ ಪಡೆದಿದ್ದಾರೆ. ಅಭ್ಯರ್ಥಿಯು ತನ್ನ ಎಲ್ಸಿಯಲ್ಲಿ ಲಿಂಗಾಯತ ಎಂದು ನಮೂದಾಗಿದೆ. ಅವರು ಗದಗನ ನಿವಾಸಿಯಾಗಿದ್ದುಕೊಂಡರೂ ಗದಗನ ಸಮಾಜದ ಸದಸ್ಯತ್ವ ಪಡೆಯದೇ ಹುಬ್ಬಳ್ಳಿ ಸಂಘದಿಂದ ‘ಗಾಣಿಗ’ ಜಾತಿಯ ಸದಸ್ಯತ್ವ ಮುಂದಿಟ್ಟುಕೊಂಡು, ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ವಾಮ ಮಾರ್ಗ ಬಿಜೆಪಿಯವರಿಗೆ ಕಾಣುತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಬಿಜೆಪಿ ಮುಖಂಡರ ಸಹಾಯ ಪಡೆದು ಅನೀಲ ಅಬ್ಬಿಗೇರಿ ಅವರು ಗದಗನ ಬದಲಾಗಿ ಹುಬ್ಬಳ್ಳಿ ಸಂಘದಿಂದ ಸದಸ್ಯತ್ಯ ಪಡೆದಿದ್ದು ಏಕೆ? ಇದು ವಾಮಮಾರ್ಗ ಅಲ್ಲವೇ?. ಇನ್ನು ಯಾವುದೇ ಜಾತಿ ಪ್ರಮಾಣ ಪತ್ರ ಪಡೆಯುವಾಗ ತಂದೆ-ತಾಯಿ ಪ್ರಮಾಣ ಪತ್ರದಲ್ಲಿನ ಜಾತಿ ಪರಿಗಣಿಸುತ್ತಾರೆ ಹೊರತು ತಂದೆಗೆ ಮಕ್ಕಳ ಸರ್ಟಿಫಿಕೇಟ ಜಾತಿಯನ್ನಲ್ಲ. ಇದು ಯಾವ ಮಾರ್ಗ ಎಂಬುದನ್ನು ಬಿಜೆಪಿಯವರೇ ಹೇಳಲಿ. ಓರ್ವ ರಾಜ್ಯಸಭಾ ಸದಸ್ಯರು, ವಿಧಾನ ಪರಿಷತ್ ನ ಮೂವರು ಸದಸ್ಯರನ್ನು ಗದಗನಲ್ಲಿ ಹೆಸರು ಸೇರ್ಪಡೆಗೆ ನೀಡಿರುವ ಅರ್ಜಿ ಬಗ್ಗೆ ಪ್ರಶ್ನಿಸುವ ಬಿಜೆಪಿಗರು, ಅಧಿಕಾರಿಗಳ ಮೇಲೆ ಒತ್ತಡ ತಂದು ಸೇರ್ಪಡೆ ಮಾಡದಂತೆ ಮಾಡಿದ್ದಾರೆ. ದಾವಣಗೆರೆಯಲ್ಲಿ ಸೇರ್ಪಡೆಗೊಂಡ ಬೆಂಗಳೂರಿನ ಏಳು ಜನ ಬಿಜೆಪಿಯ ವಿಧಾನ ಪರಿಷತ್ ಸದಸ್ಯರು ದಾವಣಗೆರೆಯಲ್ಲಿ ಮತದಾರರಾಗಿದ್ದರ ಬಗ್ಗೆ ಮಾತನಾಡಲಿ. ಅದು ಬಿಟ್ಟು ಬಾವಿಯಲ್ಲಿನ ಕಪ್ಪೆಯಂತೆ ಹೇಳಿಕೆ ನೀಡಬಾರದು.ನಗರಸಭೆಯಲ್ಲಿ 18 ಸ್ಥಾನ ಗೆದ್ದಿದ್ದೇವೆ ಎನ್ನುವವರು ಅವಳಿ ನಗರದಲ್ಲಿ ಕಾಂಗ್ರೆಸ್ಗೆ ಬಂದ ಮತಗಳೆಷ್ಟು, ಬಿಜೆಪಿಗೆಷ್ಟು ಬಂದಿವೆ ಎಂಬುದನ್ನು ಅವಲೋಕನ ಮಾಡಿಕೊಳ್ಳಲಿ. ಗದಗ-ಬೆಟಗೇರಿಯ 35 ವಾರ್ಡಳಲ್ಲಿ ಕಾಂಗ್ರೆಸ್ಗೆ 34,972 ಮತ, ಬಿಜೆಪಿಗೆ 34,311 ಮತ ಬಂದಿವೆ. ಇಲ್ಲೂ ಕಾಂಗ್ರೆಸ್ ಮುನ್ನಡೆಯಿದೆ ಎನ್ನುವದನ್ನು ಬಿಜೆಪಿಯವರು ಮನನ‌ ಮಾಡಿಕೊಳ್ಳಬೇಕು ಎಂದು ಬಿಜೆಪಿಯವರಿಗೆ ಅಶೋಕ ಮಂದಾಲಿ ಪತ್ರಿಕಾ ಪ್ರಕಟಣೆ ಮೂಲಕ ಟಾಂಗ್ ಕೊಟ್ಟಿದ್ದಾರೆ.

RELATED ARTICLES

Related Articles

TRENDING ARTICLES