ಕೊಪ್ಪಳ : ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ನಾಲ್ಕು ಜಿಲ್ಲೆಗಳ ಭತ್ತ ಕಟಾವು ಮುಗಿದಿದ್ದು, ಯಂತ್ರಗಳ ಮಾಲೀಕರು ಹೆಚ್ಚು ದುಡಿಮೆ ಮಾಡಲು ತಮಿಳುನಾಡಿನತ್ತ ಮುಖ ಮಾಡಿದ್ದಾರೆ. ಭತ್ತ ಕಟಾವು ಯಂತ್ರಗಳು ತಮಿಳುನಾಡಿನತ್ತ ಹೊರಟ ವಿಡಿಯೋ ದ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ರಾಯಚೂರು ಜಿಲ್ಲೆಗಳ ಗಂಗಾವತಿ, ಕಂಪ್ಲಿ, ಸಿಂಧನೂರು, ಬಳ್ಳಾರಿ, ಹೊಸಪೇಟೆ ಮುಂತಾದ ಭಾಗಗಳ ಭತ್ತ ಕಟಾವು ಯಂತ್ರಗಳ ಮಾಲೀಕರು ಜಿಲ್ಲೆಗಳನ್ನು ತೊರೆದು ತಮಿಳುನಾಡಿಗೆ ಹೋಗಲು ಸಿದ್ಧತೆ ನಡೆಸಿರುವುದು ಕಂಡು ಬಂದಿದೆ. ತುಂಗಭದ್ರಾ ಕಟ್ಟುಪ್ರದೇಶದಲ್ಲಿ ಭತ್ತ ಕಟಾವು ಸಂಪೂರ್ಣ ಮುಗಿದಿದೆ. ಇಲ್ಲಿ ಸದ್ಯ ಭತ್ತ ಕಟಾವು ಯಂತ್ರಗಳಿಗೆ ಯಾವುದೇ ರೀತಿಯ ಕೆಲಸವಿಲ್ಲ. ಹೀಗಾಗಿ ಯಂತ್ರಗಳನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದ ಯಂತ್ರಗಳ ಚಾಲಕರು, ಸಹಾಯಕರು ಖಾಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹೀಗಾಗಿ ನಾಲ್ಕು ಜಿಲ್ಲೆಗಳ ಯಂತ್ರಗಳ ಮಾಲೀಕರು ಒಗ್ಗೂಡಿ ರೈಲ್ವೆ ಇಲಾಖೆಯ ಸಹಾಯ ಪಡೆದು ಯಂತ್ರಗಳನ್ನು ರೈಲಿನಲ್ಲಿ ಸಾಗಿಸಲು ಮುಂದಾಗಿದ್ದಾರೆ. ಗಂಗಾವತಿಯ ರೈಲ್ವೆ ನಿಲ್ದಾಣದಲ್ಲಿ ನಾಲ್ಕು ಜಿಲ್ಲೆಗಳ ಭತ್ತ ಕಟಾವು ಯಂತ್ರಗಳು ತಮಿಳುನಾಡಿತ್ತ ಹೊರಟಿವೆ.ಸಿಂಧನೂರು, ಗಂಗಾವತಿ, ಶ್ರೀರಾಮನಗರ, ಕಂಪ್ಲಿ, ಹೊಸಪೇಟೆ, ಬಳ್ಳಾರಿ ತಾಲೂಕುಗಳ ಭತ್ತ ಕಟಾವು ಯಂತ್ರಗಳ ಮಾಲೀಕರು ಕೆಲಸವಿಲ್ಲದೆ ಇದ್ದರಿಂದ ಎಲ್ಲ ಮಾಲೀಕರು ಮಾತುಕತೆ ಮಾಡಿಕೊಂಡು ಏಕಕಾಲಕ್ಕೆ ತಮಿಳುನಾಡಿಗೆ ವಲಸೆ ಹೋಗಲು ನಿರ್ಧರಿಸಿಡಿದ್ದಾರೆ. ಸದ್ಯ ಗಂಗಾವತಿಯ ರೈಲ್ವೆ ನಿಲ್ದಾಣದಲ್ಲಿ 100 ಭತ್ತ ಕಟಾವು ಯಂತ್ರಗಳು ಸಿದ್ಧವಾಗಿದ್ದು, ಯಂತ್ರಗಳ ಜತೆಗೆ ಪ್ರತಿ ಯಂತ್ರಕ್ಕೆ ಮೂವರು ಕೂಲಿಕಾರರು ಸೇರಿ 300 ಜನ ಕೂಲಿಕಾರರು ಉದ್ಯೋಗಕ್ಕಾಗಿ ಹೊರಟಿದ್ದಾರೆ.
ಭತ್ತ ಕಟಾವು ಮಾಡಲು ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಯಲ್ಲಿ ಪ್ರತಿ ಗಂಟೆಗೆ 2,200 ರಿಂದ 2,500 ರೂ.ಗಳಿಗೆ ನಿಗದಿ ಮಾಡಲಾಗಿದೆ. ಆದರೆ, ತಮಿಳುನಾಡಿನಲ್ಲಿ ಭತ್ತ ಕಟಾವು ಮಾಡಲು ಪ್ರತಿ ಗಂಟೆಗೆ ಯಂತ್ರದ ಬಾಡಿಗೆ 2,800 ರಿಂದ 2,900 ನಿಗದಿ ಮಾಡಲಾಗಿದೆ. ಪ್ರತಿ ವರ್ಷವೂ ಭತ್ತ ಕಟಾವು ಮುಗಿದ ನಂತರ, ಬೇರೆ ರಾಜ್ಯಗಳಿಗೆ ಹೋಗಲು ಯಂತ್ರಗಳ ಸಾಗಣೆ ವೆಚ್ಚ ದುಬಾರಿಯಾಗುತ್ತದೆ ಎನ್ನುವ ಭಯದಲ್ಲಿ ಮಾಲೀಕರು ವಲಸೆ ಹೋಗಲು ಮುಂದಾಗುತ್ತಿರಲಿಲ್ಲ.
ಪ್ರತಿ ಬಾರಿ ರೈಲ್ವೆ ಇಲಾಖೆಯವರು ಅನುಕೂಲ ಮಾಡಿಕೊಡುತ್ತಿರುವ ಹಿನ್ನಲೆಯಲ್ಲಿ ಯಂತ್ರಗಳ ಮಾಲೀಕರು ಹೆಚ್ಚು ಹಣ ದುಡಿಯಲು ಹೋಗುತ್ತಿರುವುದು ಕಂಡು ಬಂದಿದೆ. ರಸ್ತೆ ಸಾಗಣೆಗೆ ಹೆಚ್ಚು ವೆಚ್ಚಮೂಲಕ ತಮಿಳುನಾಡಿಗೆ ಯಂತ್ರಗಳ ಸಾಗಣೆಗೆ ಪ್ರತಿ ಯಂತ್ರಕ್ಕೆ 28 ರಿಂದ 35 ಸಾವಿರ ರೂ.ವೆಚ್ಚವಾಗಲಿದೆ. ಹೀಗಾಗಿ ಮಾಲೀಕರು ವಲಸೆ ಹೋಗಲು ಧೈರ್ಯ ಮಾಡುತ್ತಿರಲಿಲ್ಲ. ರೈಲ್ವೆ ಇಲಾಖೆಯವರು ಪ್ರತಿ ಯಂತ್ರಕ್ಕೆ ಸಾಗಣೆಗೆ 15ರಿಂದ 16 ಸಾವಿರ ರೂ. ಖರ್ಚಾಗಲಿದೆ ಎನ್ನುವ ಉದ್ದೇಶದಿಂದ ಮಾಲೀಕರು ಯಂತ್ರಗಳೊಂದಿಗೆ ದುಡಿಯಲು ವಲಸೆ ಹೊರಟಿದ್ದಾರೆ ಎನ್ನಲಾಗಿದೆ.
ಬೇರೆ ರಾಜ್ಯಗಳಿಗೆ ಭತ್ತ ಕಟಾವು ಮಾಡಲು ಹೋದರೆ ಖರ್ಚು ಅಧಿಕವಾಗಲಿದೆ ಎಂಬ ಕಾರಣಕ್ಕೆ ಮಾಲೀಕರು ವಲಸೆ ಹೋಗುತ್ತಿರಲಿಲ್ಲ. ಈ ಬಾರಿ ರೈಲ್ವೆ ಇಲಾಖೆ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಭತ್ತ ಕೊಯ್ಲಿಗೆ ತಮಿಳುನಾಡಿನ ಕಡೆ ಹೊರಟಿವೆ