ಬೆಂಗಳೂರು:ಮಹಾಮಾರಿ ಕೊರೋನಾ 3ನೇ ಅಲೆಯ ಆತಂಕದ ನಡುವೆಯೂ ಜನರ ನಿರ್ಲಕ್ಷ್ಯ ಮಾತ್ರ ಕಡಿಮೆಯಾಗುತ್ತಿಲ್ಲ. ಮಾರುಕಟ್ಟೆಗಳಲ್ಲಿ ಜನ ಸಾಮಾಜಿಕ ಅಂತರ ಮರೆತು ತರಕಾರಿ ಖರೀದಿಗೆ ಮುಗಿ ಬೀಳುತ್ತಿದ್ದಾರೆ. ಹೀಗಾಗಿ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡು ಮಾರುಕಟ್ಟೆಗಳನ್ನ ಸ್ಥಳಾಂತರ ಮಾಡಲಾಗಿದೆ.
ಸಿಲಿಕಾನ್ ಸಿಟಿಯಲ್ಲಿನ ಮಾರುಕಟ್ಟೆಗಳಲ್ಲಿ ದಿನನಿತ್ಯ ಲಕ್ಷಾಂತರ ಜನ ವ್ಯಾಪಾರ ವಹಿವಾಟು ನಡೆಸುತ್ತಾರೆ. ಅಲ್ಲದೆ ಕೋಟ್ಯಂತರ ರುಪಾಯಿ ವ್ಯವಹಾರ ನಡೆಯುತ್ತದೆ. ಈಂತಹ ಮಾರುಕಟ್ಟೆಗಳು ಈಗಾ ಕೊರೋನಾಗೆ ಸಿಲುಕಿವೆ. ನಗರದಲ್ಲಿ ಕೊವಿಡ್ ಅಬ್ಬರ ದಿನೇ ದಿನೇ ಹೆಚ್ಚಾಗುತ್ತಿದೆ. ಇನ್ನೂ ಸರ್ಕಾರ ಎಷ್ಟೇ ಟಫ್ ರೂಲ್ಸ್ ಜಾರಿ ಮಾಡಿದರು ಜನ ಮಾತ್ರ ಸರ್ಕಾರದ ರೂಲ್ಸ್ಗೆ ಕ್ಯಾರೆ ಅನ್ನುತ್ತಿಲ್ಲ. ಹೀಗಾಗಿ ಹೆಚ್ಚು ಜನಸಂದಣಿ ಇರುವ ಕೆ.ಆರ್. ಮಾರ್ಕೆಟ್‌ನ್ನ ಬಿಬಿಎಂಪಿ ಬೇರೆ ಕಡೆ ಶಿಫ್ಟ್ ಮಾಡುತ್ತಿದೆ.
ನಿತ್ಯ ಜನ ಜಂಗುಳಿಯಿಂದ ಕೂಡಿರುತ್ತಿದ್ದ ನಗರದ ಪ್ರಮುಖ ಕೆ.ಆರ್. ಮಾರ್ಕೆಟ್ ವೀಕೆಂಟ್ ಕರ್ಫ್ಯೂ ಹಿನ್ನೆಲೆ ಸ್ತಬ್ಧವಾಗಿದೆ. ಜನರಿಲ್ಲದೇ ಬಿಕೋ ಎನ್ನುತ್ತಿದ್ದು, ಮಾರುಕಟ್ಟೆನಲ್ಲಿ ವ್ಯಾಪಾರ ವಹಿವಾಟಿಗೆ ಕಂಪ್ಲೀಟ್ ಬ್ರೇಕ್ ಬಿದ್ದಿದೆ. ಕಡ್ಡಾಯವಾಗಿ ತಳ್ಳು ಗಾಡಿಯಲ್ಲಿ ವ್ಯಾಪಾರ ಮಾಡಲು ಸೂಚನೆ ನೀಡಲಾಗಿದ್ದು, ಬೆಳಗಿನ ಜಾವ 3 ರಿಂದ ಮಧ್ಯಾಹ್ನ 3ರವರೆಗೆ ಮಾತ್ರ ವ್ಯಾಪಾರ ಮಾಡಲು ಬಿಬಿಎಂಪಿ ಅವಕಾಶ ನೀಡಿದೆ.ಹೂವಿನ ವ್ಯಾಪಾರಸ್ಥರು ಮಾರ್ಕೆಟ್ ಶಿಫ್ಟ್ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮಗೆ ಶಾಶ್ವತವಾಗಿ ಇಲ್ಲೇ ಹೂವು ಮಾರಲು ವ್ಯವಸ್ಥೆ ಮಾಡಿ. ಏಕೆಂದರೆ ಇಲ್ಲಿ ಸಾಮಾಜಿಕ ಅಂತರ ಕಾಪಾಡಬಹುದು. ದೊಡ್ಡ ವಿಶಾಲವಾದ ಜಾಗ ಇದೆ. ಪದೇಪದೇ ಬಿಬಿಎಂಪಿ ಶಿಫ್ಟ್ ಮಾಡಿ ನಮಗೆ ತೊಂದರೆ ಕೊಡುತ್ತಿದೆ. ವ್ಯಾಪಾರಕ್ಕೆ ತೊಂದರೆ ಕೊಡಬೇಡಿ ಅಂತ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಒಟ್ಟಿನಲ್ಲಿ ಕೊರೋನಾ ಮೂರನೇ ಅಲೆಯನ್ನ ಕಟ್ಟಿ ಹಾಕಲು ಸರ್ಕಾರ ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಆದರೆ ದಿನಬೆಳಗಾದರೆ ಸಾಕು ಸಿಟಿಯಲ್ಲಿ ಕೊರೋನಾ ಪ್ರಕರಣಗಳು ಸ್ಫೋಟವಾಗುತ್ತಿದ್ದು, ಮತ್ತೆ ಆತಂಕಕ್ಕೆ ಕಾರಣವಾಗಿದೆ.