Friday, November 22, 2024

ಮೊಬೈಲ್​ ಹೆಚ್ಚು ಬಳಸೋದ್ರಲ್ಲಿ ಚೀನಿಯರೇ ನಂ.1 : ಭಾರತ.. ?

ಮೊಬೈಲ್​ ಇದು ಇವತ್ತು ಮಾನವ ಜೀವನದ ಒಂದು ಅವಿಭಾಜ್ಯ ಅಂಗವಾಗಿ ಹೋಗಿದೆ. ಇವತ್ತು ಅದೆಷ್ಟೋ ಜನ ಒಂದು ಹೊತ್ತು ಊಟವನ್ನ ಬೇಕಾದ್ರೂ ಬಿಡ್ತಾರೆ. ಆದ್ರೆ ಮೊಬೈಲ್​ ಬಿಟ್ಟು ಒಂದು ಕ್ಷಣ ಕೂಡ ಇರೋದಿಲ್ಲ. ಇದಕ್ಕೆ ಸಾಕಷ್ಟು ಉದಾಹರಣೆಗಳು ಕೂಡ ನಮಗೆ ಸಿಗ್ತವೆ. ಜನ್ರು ಇವತ್ತು ಮೊಬೈಲ್​ಗೆ ದಾಸರಾಗೋದಕ್ಕೆ ಕಾರಣ ಅವುಗಳಲ್ಲಿನ ಫೀಚರ್​. ಇವತ್ತು ಮೊಬೈಲ್​ ಮೂಲಕ ಯಾರು ಯಾರನ್ನ ಬೇಕಾದರೂ ಸಂಪರ್ಕಿಸಬಹುದು. ಸಾಮಾಜಿಕ ಜಾಲತಾಣದ ಮೂಲಕ ಜಗತ್ತಿನ ಯಾರ ಜೊತೆಗೆ ಬೇಕಾದರೂ ಗೆಳೆತನವನ್ನ ಸಂಪಾದಿಸಿಕೊಳ್ಳಬಹುದು. ವಿಡಿಯೋ ಕಾಲ್​ ಮುಖಾಂತರ ತಮ್ಮವರನ್ನ ನೇರವಾಗಿ ಭೇಟಿಯಾದಷ್ಟೆ ಖುಷಿಯಾಗಿ ಮಾತನಾಡಬಹುದು. ಆನ್​ಲೈನ್​ ಟ್ರಾನ್ಸ್ಯಾಕ್ಷನ್​ ಮೂಲಕ ಯಾರು ಯಾರಿಗೆ ಬೇಕಾದರೂ ಹಣವನ್ನ ವರ್ಗಾವಣೆ ಮಾಡಬಹುದು. ಅಬ್ಬಾ ಹೇಳ್ತಾ ಹೋದ್ರೆ ಒಂದಾ ಎರಡಾ? ಹತ್ತು ಹಲವು ಫೀಚರ್ಸ್​ಗಳು ಜನರನ್ನ ಮೊಬೈಲ್​ ಬಿಟ್ಟಿರಲಾದಷ್ಟು ಮಟ್ಟಿಗೆ ಹತ್ತಿರವಾಗಿಸಿವೆ.

ಇನ್ನು ಇಷ್ಟೆಲ್ಲ ಸೌಲಭ್ಯಗಳು ಮೊಬೈಲ್​ನಲ್ಲಿ ಇದ್ದ ಮೇಲೆ ಕೇಳಬೇಕಾ? ಇದೇ ಕಾರಣಕ್ಕೆ ಇವತ್ತು ಜಗತ್ತಿನಾದ್ಯಂತ ಮೊಬೈಲ್ ಬಳಸುವವರ ಸಂಖ್ಯೆ ಏರಿಕೆಯಾಗಿದೆ.. ಹೀಗೆ ಮೊಬೈಲ್​ ಬಳಕೆ ಏರಿಕೆಯಾಗ್ತಾ ಇದ್ದ ಹಾಗೆ ಆನ್​ಲೈನ್​ ಕ್ರೈಮ್​ ರೇಟ್​ಗಳು ಕೂಡ ಹೆಚ್ಚಾಗ್ತಾ ಇವೆ. ಇದರ ಮಧ್ಯದಲ್ಲಿ ಇದೀಗ ಮೊಬೈಲ್​ಗೆ ದಾಸರಾಗುವ ಬಹುತೇಕ ಯುವ ಸಮೂಹ ಮಾನಸಿಕ ಕಾಯಿಲೆಯಂತಹ ಗಂಭೀರವಾದ ಸಮಸ್ಯೆಗಳಿಗೆ ತುತ್ತಾಗುತ್ತಿರುವ ಬಗ್ಗೆ ವರದಿಗಳು ದಾಖಲಾಗಿದೆ. ಹೀಗೆ ಮೊಬೈಲ್​ ಗೆ ದಾಸರಾಗುವುದನ್ನ ತಪ್ಪಿಸಲು ಹಾಗು ಈ ಬಗ್ಗೆ ಜಾಗೃತಿಯನ್ನ ಮೂಡಿಸಲು ಜಗತ್ತಿನಲ್ಲಿ ಹಲವು ಸಂಸ್ಥೆಗಳು ಕಾರ್ಯ ನಿರ್ವಹಿಸ್ತಾ ಇದ್ರೂ ಅದು ಇದುವರೆಗೆ ಕೂಡ ಯಾವುದೇ ಪ್ರಯೋಜನ ನೀಡಿಲ್ಲ. ಹಾಗಾಗಿ ಈ ಮೊಬೈಲ್​ನ ಅತಿಯಾದ ಬಳಕೆ ಇದೀಗ ಜಗತ್ತಿನ ಗಂಭೀರವಾದ ಸಮಸ್ಯೆಯಾಗಿ ಮಾರ್ಪಟ್ಟಿದೆ.

ಈ ಬಗ್ಗೆ ಅರ್ಥ ಮಾಡಿಕೊಂಡಿರುವ ಆಪ್ ಡೇಟಾ ಅನಾಲಿಟಿಕ್ಸ್ ಸಂಸ್ಥೆ, ಜನಸಾಮಾನ್ಯರ ಮೊಬೈಲ್​ ಬಳಕೆ ಅವಧಿಯನ್ನ ಅಧ್ಯಯನ ನಡೆಸಿದೆ. ಅಂದ್ರೆ ಒಂದು ದಿನಕ್ಕೆ ಒಬ್ಬ ಮನುಷ್ಯ ಎಷ್ಟು ಗಂಟೆಗಳ ಕಾಲ ಮೊಬೈಲ್​ ಬಳಸ್ತಾನೆ ಅನ್ನೋ ವರದಿಯಿದು. ಈ ವರದಿಯ ಆಧಾರದ ಮೇಲೆ ಯಾವ ದೇಶದ ಜನ್ರು ಎಷ್ಟು ಗಂಟೆಗಳ ಕಾಲ ಮೊಬೈಲ್ ಬಳಸ್ತಾರೆ ಅನ್ನೋ ಮಾಹಿತಿಯನ್ನ ನೀಡಲಾಗುತ್ತೆ. ಇದೀಗ ಈ ಸಂಸ್ಥೆ 2021ನೇ ಸಾಲಿನ ದತ್ತಾಂಶವನ್ನ ಬಿಡುಗಡೆ ಮಾಡಿದ್ದು, ಇದೀಗ ಈ ವರದಿಗೆ ಸಂಶೋಧಕರು ಆತಂಕ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಈ ವಿಚಾರದಲ್ಲಿ ಭಾರತ 2ನೇ ಸ್ಥಾನದಲ್ಲಿದ್ದು,  ಭಾರತೀಯ ಜನ ಸಮೂಹದಲ್ಲಿ ಮೊಬೈಲ್​ ನಿರ್ಣಾಯಕ ಪಾತ್ರವನ್ನ ವಹಿಸುತ್ತಿದೆ ಅಂತ ಹೇಳಲಾಗ್ತಾ ಇದೆ.

ಮೊಬೈಲ್ ಬಳಕೆಯಲ್ಲಿ, ಭಾರತವು ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತೀಯರು 2021ರಲ್ಲಿ 69,000 ಕೋಟಿ ಗಂಟೆಗಳನ್ನ ಫೋನ್‌ನಲ್ಲಿ ಕಳೆದಿದ್ದಾರೆ ಅಂತ ವರದಿಗಳು ಹೇಳ್ತಾ ಇವೆ. ಇದಕ್ಕೆ ಪ್ರಮುಖ ಕಾರಣ ಕೊರೋನಾ ಅಂತ ಹೇಳಲಾಗ್ತಾ ಇದ್ದು, ಇದೀಗ ಕೊವಿಡ್-19  ಭಾರತ ಹಾಗು ಜಗತ್ತನ್ನು ಹೊಸ ಡಿಜಿಟಲ್ ಯುಗಕ್ಕೆ ಕೊಂಡೊಯ್ದಿದೆ ಅಂತ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆಪ್ ಡೇಟಾ ಅನಾಲಿಟಿಕ್ಸ್ ಸಂಸ್ಥೆ ನೀಡಿರುವ 2021ರ ಅವಧಿಯ ಬಗೆಗಿನ ವರದಿಯ ಪ್ರಕಾರ, ಭಾರತೀಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ 69,000 ಕೋಟಿ ಗಂಟೆಗಳನ್ನು ಕಳೆದಿದ್ದಾರೆ. ಈ ಮೂಲಕ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಜಾಗತಿಕವಾಗಿ 1,11,000 ಕೋಟಿ ಗಂಟೆಗಳ ಮೊಬೈಲ್ ಬಳಸುವ ಮೂಲಕ ಚೀನಾದ ಜನರು ಮೊದಲ ಸ್ಥಾನದಲ್ಲಿದ್ದಾರೆ. ಕೇವಲ 11,000 ಗಂಟೆಗಳ ಮೊಬೈಲ್ ಸಮಯದೊಂದಿಗೆ ಅಮೆರಿಕದ ಜನರು ಮೂರನೇ ಸ್ಥಾನದಲ್ಲಿದ್ದಾರೆ ಅಂತ ವರದಿಯ ಅಂಕಿ ಆಂಶಗಳು ಹೇಳ್ತಾ ಇವೆ.

ಇದೇ ವರದಿಯ ಅಂಕಿಅಂಶಗಳ ಪ್ರಕಾರ, 2020 ರಲ್ಲಿ ಪ್ರತೀ ಭಾರತೀಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಪ್ರತಿದಿನ ಸರಾಸರಿ 4.7 ಗಂಟೆಗಳನ್ನು ಕಳೆಯುತ್ತಾರೆ. ದಿನಕ್ಕೆ ಮೊಬೈಲ್ ಬಳಕೆಯಲ್ಲಿ ಬ್ರೆಜಿಲ್ ಮತ್ತು ಇಂಡೋನೇಷ್ಯಾ 5.4 ಗಂಟೆಗಳು, ದಕ್ಷಿಣ ಕೊರಿಯಾ 5 ಗಂಟೆಗಳು, ಮೆಕ್ಸಿಕೋ 4.8 ಗಂಟೆಗಳ ಕಾಲ ಮೊಬೈಲ್​ ಬಳಸುವ ದೇಶಗಳಾಗಿವೆ ಅನ್ನೋ ವರದಿಗಳು ಪತ್ತೆಯಾಗಿತ್ತು. ಸದ್ಯದ ವರದಿಯ ಪ್ರಕಾರ ಭಾರತೀಯರು ಮೊಬೈಲ್ ಅಪ್ಲಿಕೇಶನ್‌ಗಳನ್ನು 2600 ಕೋಟಿ ಬಾರಿ ಡೌನ್‌ಲೋಡ್ ಮಾಡಿದ್ದು, ಅದರಲ್ಲಿ 100 ಕೋಟಿ ಡೌನ್‌ಲೋಡ್‌ಗಳು ಯುಪಿಐ, ಬ್ಯಾಂಕ್ ಅಪ್ಲಿಕೇಶನ್‌ಗಳು, ಸ್ಟಾಕ್ಸ್, ಲೋನ್ ಅಪ್ಲಿಕೇಶನ್‌ಗಳಂತಹ ಹಣಕಾಸು ಅಪ್ಲಿಕೇಶನ್‌ಗಳಿಗೆ ಸಂಬಂಧ ಪಟ್ಟಿವೆ.

ಒಟ್ಟಾರೆಯಾಗಿ ಇದೀಗ ಈ ವರದಿ ಸಂಶೋಧಕರ ಆತಂಕವನ್ನ ಹೆಚ್ಚು ಮಾಡಿದ್ದು, ಜನಸಾಮಾನ್ಯರ ಮೊಬೈಲ್​ ಬಳಕೆ ಹೀಗೆ ಹೆಚ್ಚಾಗ್ತಾ ಹೋದ್ರೆ ಒಂದಲ್ಲ ಒಂದು ರೀತಿಯಾದ ಮಾನಸಿಕ ಕಾಯಿಲೆಗಳು ಜನ್ರನ್ನ ಕಾಡೋದ್ರಲ್ಲಿ ಅನುಮಾನವಿಲ್ಲ ಅನ್ನೋ ಅಭಿಪ್ರಾಯವನ್ನ ವ್ಯಕ್ತಪಡಿಸ್ತಾ ಇದ್ದಾರೆ. ಸದ್ಯಕ್ಕೆ ಮೊಬೈಲ್​ ಬಳಕೆಯ ನಿಯಂತ್ರಣದ ಬಗ್ಗೆ ಆಯಾ ದೇಶದ ಸರ್ಕಾರಗಳು ತಮ್ಮ ಜನರಲ್ಲಿ ಜಾಗೃತಿಯನ್ನ ಮೂಡಿಸಬೇಕಾಗಿದೆ. ಆ ಮೂಲಕ ಮುಂದೆ ಮೊಬೈಲ್ ಬಳಕೆಯಿಂದ ಆಗುವ ಅಪಾಯವನ್ನ ಕೂಡ ಕಡಿಮೆ ಮಾಡಿದ ಹಾಗಾಗುತ್ತದೆ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ.

ಲಿಖಿತ್​​ ರೈ, ಪವರ್​​ ಟಿವಿ

RELATED ARTICLES

Related Articles

TRENDING ARTICLES