ಬೆಂಗಳೂರು : ಸಿಲಿಕಾನ್ ಸಿಟಿಗೆ ದೇಶ ವಿದೇಶಗಳಿಂದ ಡ್ರಗ್ಸ್ ದಾಂಗುಡಿ ಇಡ್ತಿದೆ. ಯುವ ಜನರು,ಸೆಲೆಬ್ರಿಟಿಗಳನ್ನು ತನ್ನತ್ತ ಸೆಳೆಯುತ್ತಾ ಮಾದಕತೆಯ ಉನ್ಮಾದದಲ್ಲಿ ತೇಲಿಸುತ್ತಿದೆ ಎನ್ನಲಾಗ್ತಿತ್ತು. ಆದ್ರೀಗ ಡ್ರಗ್ ತಯಾರಿಕಾ ಕೇಂದ್ರವೇ ನಗರದಲ್ಲಿದೆ ಎಂಬುದು ಎರಡನೇ ಸಲ ಸಾಬೀತಾಗಿದೆ.
ಗ್ಯಾಸ್ ಸ್ಟೌವ್ ಅದರ ಮೇಲೆ ಕುಕ್ಕರ್. ಆದ್ರೆ, ಕುಕ್ಕರ್ನ ವಿಶಲ್ ಮಾತ್ರ ಮಾಯ. ವಿಶಲ್ನ ಜಾಗದಲ್ಲಿ ಪೈಪ್ ಅಳವಡಿಕೆ ಮಾಡಿರೋದನ್ನ ನೋಡಿದ್ರೆ ಗೊತ್ತಾಗುತ್ತಾ ಇದು ಅಡುಗೆ ಮನೆಯ ಹೆಂಗಳೆಯರ ಕೆಲಸವಲ್ಲ. ಖತರ್ನಾಕ್‌ಗಳು ಏನೋ ಮಾಡಿದ್ದಾರೆ ಅನ್ನೋದು.
ಸಿಟಿಯ ಹೊರವಲಯದ ಸೋಲದೇವನಹಳ್ಳಿ ಬಳಿ ನೈಜೀರಿಯಾದ ಸಹೋದರರು ವಾಸಿಸುತ್ತಿದ್ರು. ಸದಾ ಕುಕ್ಕರ್ ಬಳಕೆ ಮಾಡ್ತಿದ್ರು. ಕುಕ್ಕರ್ ಬಳಕೆಗೆ ಅಡುಗೆ ಮಾಡಲ್ಲ. ಕೊಕೇನ್, ಎಂಡಿಎಂಎ ಮತ್ತು ಕೆಮಿಕಲ್ ಬಳಕೆ ಮಾಡಿಕೊಂಡು ರಾಸಾಯನಿಕ ವಸ್ತು ಕಲಬೆರಕೆಯನ್ನು ಡ್ರಗ್ಸ್ ತಯಾರಿ ಮಾಡ್ತಿದ್ರು. ತಮ್ಮ ಮೇಲೆ ಯಾವುದೇ ಅನುಮಾನ ಬಾರದ ರೀತಿಯಲ್ಲಿ ಮಾಡ್ತಿದ್ದ ಕೆಲಸದ ಮೇಲೆ ಸಿಸಿಬಿಯ ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಕಣ್ಣು ಹಾಕಿದ್ರು. ಎಂಡಿಎಂಎ ಕ್ರಿಸ್ಟೆಲ್ ತಯಾರಿ ಮಾಡುತ್ತಿದ್ದ ನೈಜೀರಿಯಾ ಮೂಲದ ರಿಚರ್ಡ್‌ನನ್ನು ಮಾಲು ಸಮೇತ ಬಂಧಿಸಿದ್ದಾರೆ.
ರಿಚರ್ಡ್ ಸಹೋದರರು ಮುಂಬೈ ಮತ್ತು ದೆಹಲಿಯಿಂದ ರಾಸಾಯನಿಕ ವಸ್ತುಗಳನ್ನು ಖರೀದಿಸುತ್ತಿದ್ರು. ಆ ಬಳಿಕ ಕುಕ್ಕರ್ ಮೂಲಕ ಬಟ್ಟಿ ಇಳಿಸುವ ಕ್ರಮದಲ್ಲಿ ಡ್ರಗ್ ತಯಾರಿಸುತ್ತಿದ್ರು. ಇನ್ನು ವಿದೇಶಕ್ಕೂ ಸಿಂಥೆಟಿಕ್ ಡ್ರಗ್ಸ್ ಕೊರಿಯರ್ ಮೂಲಕ ಸಪ್ಲೈ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಸೋಡಿಯಂ ಹೈಡ್ರಾಕ್ಸೈಡ್, ಆ್ಯಸಿಡ್, ಕೊಕೇನ್ ಸೇರಿದಂತೆ ಕೋಟಿ ಮೌಲ್ಯದ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.
ಸದ್ಯ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದ್ರೆ, ವಿದೇಶದ ಜೊತೆಗೆ ಸೋಲದೇವನಹಳ್ಳಿ ಸುತ್ತಮುತ್ತ ಕಾಲೇಜು ವಿದ್ಯಾರ್ಥಿಗಳಿಗೂ ಡ್ರಗ್ಸ್ ಸಪ್ಲೈ ಬಗ್ಗೆ ಮಾಹಿತಿ ಸಿಕ್ಕಿದೆ. ಡ್ರಗ್ಸ್ ಜಾಲವನ್ನು ಸಂಪೂರ್ಣ ಸದೆಬಡಿಯಬೇಕಿದೆ.