Thursday, September 19, 2024

ಪವರ್ SITಭ್ರಷ್ಟರ ಬೇಟೆ 4; ಅತ್ತಿಬೆಲೆ ಚೆಕ್​ಪೋಸ್ಟ್

ಅತ್ತಿಬೆಲೆ ಚೆಕ್​ಪೋಸ್ಟ್​; ಬೆಳಗಿನ ಜಾವ 4 ಗಂಟೆ

ನಮ್ಮ ತನಿಖಾ ತಂಡ ಅತ್ತಿಬೆಲೆ ತಲುಪೋ ವೇಳೆಗೆ ಬೆಳಗಿನ ಜಾವ 4 ಗಂಟೆಯಾಗಿತ್ತು. ಈ ಹಿಂದೆ ನೋಡಿದ್ದ ಲಾರಿ ಸಾಲುಗಳಿಗಿಂತ ನಾಲ್ಕು ಪಟ್ಟು ಲಾರಿಗಳು ಸಾಲುಗಟ್ಟಿ ನಿಂತಿದ್ದು ಕಂಡು ಬಂತು. ಲಾರಿ ಚಾಲಕರು ದಾಖಲೆ ಸಹಿತ ಕೈಲಿ 500 ರೂ ನೋಟು ಹಿಡಿದು ಸರದಿ ಸಾಲಿನಲ್ಲಿ ನಿಂತಿದ್ರು.  ನಮ್ಮ ಪ್ರತಿನಿಧಿಯನ್ನು ಸಹ ನಾವು ಇದೆ ಸರದಿಯಲ್ಲಿ ನಿಲ್ಲಿಸಿದೆವು.

ಆದ್ರೆ ಇಲ್ಲಿ ನಮ್ಮ ತಂಡಕ್ಕೆ  ಆಘಾತ ಕಾದಿತ್ತು. ಅವರು ಹಣ ದೋಚುತ್ತಿದ್ದ ಪರಿ ಎಂಥವರಿಗೂ ಅಚ್ಚರಿ ಮೂಡಿಸುವಂತಿತ್ತು. ನಮ್ಮ ಕ್ಯಾಮರಾಗಳು ಭ್ರಷ್ಟ ಅಧಿಕಾರಿಗಳ ಚಿತ್ರೀಕರಣ ಮಾಡುವದರಲ್ಲಿ ತಲ್ಲಿನವಾಗಿತ್ತು. ಒಂದು ಕ್ಷಣ ಸಹ ಮೈಮರೆಯದೆ ನಾವು ಭ್ರಷ್ಟರ ಬೇಟೆಯಲ್ಲಿ ತೊಡಗಿದ್ದೆವು.

ಎಲ್ಲ ಕಡೆ ಹಣ ವಸೂಲಿ ಮಾಡಿದ ನಂತರ ಲಂಚ ಸಂದಾಯ ಆಗಿರುವುದಕ್ಕೆ ಏನಾದರು ಒಂದು ಕುರುಹು ಕೊಡಬೇಕಲ್ಲ ಅದಕ್ಕೆಂದು ಇವರು  ಕಂಡು ಕೊಂಡ ವಾಮಮಾರ್ಗ ಎಂದರೆ ಕೈಗೆ ಸೀಲ್ ಹಾಕುವುದು. ಹೌದು, ಲಂಚ ಕೊಟ್ಟವರ ಕೈಗೆ ಚೆಕ್ಡ್ ಎನ್ನುವ ಸೀಲ್ ಹಾಕಿ ಕಳಿಸುತ್ತಾರೆ. ಹಾಗಾಗಿ ಮುಂದೆ ಯಾರೆ ಬಂದು ಚೆಕ್ ಮಾಡಿದರೂ ಈ ಸೀಲ್ ತೋರಿಸಿದರೆ ಸಾಕು ಅವರನ್ನು ಯಾರೂ ತಡೆಯುವುದಿಲ್ಲ.

ಇದೆಲ್ಲಾ ಆಗ್ತಿದ್ದಂತೆ ಆರ್ ಟಿ ಓ ಅಧಿಕಾರಿಗಳಾದ ರಮೇಶ್​ ಹಾಗೂ ಸೌಮ್ಯಾ ಇಬ್ಬರು ನಮಗೆ ಬನ್ನಿ ಕುಳಿತು ಮಾತಾಡೋಣ.. ಶೂಟ್​ ಮಾಡಬೇಡಿ.. ಎಂದು ದುಂಬಾಲು ಬಿದ್ದರು.. ನಾವು ಸರಿ ಏನು ಮಾತಾಡ್ತಾರೆ ನೋಡೊಣ ಎಂದು ಹೋದೆವು. ಅವರು ಹೇಳುವಂತೆ ಇದೆಲ್ಲಾ ಇಲ್ಲಿ ಕಾಮನ್​ ಅಂತೆ… ಇಲ್ಲಿ ನಡೆಯೋದೆಲ್ಲಾ ಮಾಮುಲಂತೆ.. ಇನ್ನು ಮುಂದುವರೆದು ಮಾತನಾಡಿದ ಇವರು ಆಘಾತಕಾರಿ ಸಂಗತಿಯೊಂದನ್ನು ಬಾಯಿ ಬಿಟ್ರು..

ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ ಕೊಡಬೇಕಂತೆ ಕೋಟಿ ಕೋಟಿ ರೂ..! ವಿಧಾನ ಸೌಧದಲ್ಲಿ ಕುಳಿತವರಿಗೂ ಪಾಲು ಕೊಡಬೇಕಂತೆ..! ಇದೆಲ್ಲಾ ಟೆಂಡರ್​ ಪ್ರಕ್ರಿಯೆಯಲ್ಲಿ ನಡೆಯುವುದಂತೆ..! ಹಣ ಕಲೆಕ್ಷನ್​ ಮಾಡಲು ಟೆಂಡರ್​ ಕರೀತಾರಂತೆ..!

ಎಸ್​.. ಇದೆಲ್ಲ​ ಕೇಳಿ ನಿಮಗೆ ಆಶ್ಚರ್ಯ ಆಗ್ತಿರಬಹುದು ಅಲ್ವಾ,  ಇಲ್ಲಿ ಹಣ ವಸೂಲಿ ಮಾಡುವುದಕ್ಕೆ ಟೆಂಡರ್​ ಕರೆಯುತ್ತಾರಂತೆ.  ಆ ಟೆಂಡರ್​ ಅವಧಿ 6 ತಿಂಗಳು ಅಥವಾ 1 ವರ್ಷದಾಗಿರುತ್ತದೆಯಂತೆ. ಇಲ್ಲಿ ಸಂಗ್ರಹವಾದ ಹಣದಲ್ಲಿ ಪ್ರತಿ ತಿಂಗಳು ಸಾರಿಗೆ ಸಚಿವ ಶ್ರೀರಾಮುಲು ಅವರಿಗೆ 6 ರಿಂದ 7 ಕೋಟಿ ರೂ ಕೊಡಬೇಕಂತೆ. ಮಿಕ್ಕಿದ್ರಲ್ಲಿ ಸರಕಾರದ ಸಾರಿಗೆ ಇಲಾಖೆಯ ಕಾರ್ಯದರ್ಶಿಗಳು, ಆಯುಕ್ತರು ಸೇರಿದಂತೆ ಎಲ್ಲರಿಗೂ ಹಣ ಸಂದಾಯ ಮಾಡಬೇಕಂತೆ. ಅದಕ್ಕೆ ಈ ಟೆಂಡರ್​ನ ಸರಕಾರದ ಮಟ್ಟದ ಹಿರಿಯ ಅಧಿಕಾರಿಗಳೇ ಕೋಡ್ತಾರೆ ಅಂತ ನಿರ್ಲಜ್ಯವಾಗಿ ಹೇಳ್ತಾರೆ ಕೇಳಿ.

ಅಬ್ಬಾ ಇವರ ಮಾತು ಕೇಳಿ ನಮ್ಮ ರಾಜ್ಯದಲ್ಲಿ ಏನು ನಡೀತಿದೆ ಎನ್ನವುದು ಅರಿತು ಕೊಳ್ಳುವುದೇ ನಮಗೊಂದು ಸವಾಲಾಗಿ ಬಿಟ್ಟಿತ್ತು. ಈ ಅಧಿಕಾರಿಗಳು ಹೇಳುತ್ತಿರುವುದು ಕೇಳಿದರೆ ನಮ್ಮ ವ್ಯವಸ್ಥೆ ಬಗ್ಗೆ ಅಸಹ್ಯವಾಗುತ್ತಿತ್ತು.  ಇಂಥಹ ಅಧಿಕಾರಿಗಳಿಂದ ನಮ್ಮ ರಾಜ್ಯ ಕಾಪಾಡಲು ಸಾಧ್ಯವಾ ಎನ್ನುವ ಪ್ರಶ್ನೆಯೊಂದಿಗೆ ಆ ದಿನದ ಕಾರ್ಯಾಚರಣೆ ನಿಲ್ಲಿಸಿದೆವು.

ನಿರಂತರ ಎರಡು ದಿನ ಭ್ರಷ್ಟರ ಬೇಟೆಯಾಡಿದ ಪವರ್ SIT ತಂಡಕ್ಕೆ ಸ್ವಲ್ಪ ವಿರಾಮದ ಅವಶ್ಯಕತೆ ಇತ್ತು. ಜೊತೆಗೆ ಮುಂದಿನ ರೇಡ್​ ಕುರಿತ ಪ್ಲ್ಯಾನ್​ ​ ಸಿದ್ದಮಾಡಿಕೊಳ್ಳುವುದಿತ್ತು. ಪವರ್ SITಭ್ರಷ್ಟರ ಬೇಟೆ ಇಲ್ಲಿಗೆ ನಿಲ್ಲುವುದಿಲ್ಲ. ನಮಗೆ ಕಂಡು ಬಂದ ಕುತೂಹಲಕಾರಿ ಸಂಗತಿಗಳು ಇನ್ನೂ ಬಹಳಷ್ಟಿವೆ. ಅವನ್ನು ಭ್ರಷ್ಟರ ಬೇಟೆ ಭಾಗ 5ರಲ್ಲಿ ಹೇಳುತ್ತೇವೆ.

RELATED ARTICLES

Related Articles

TRENDING ARTICLES