ಬೆಂಗಳೂರು : ಹಣಕ್ಕಾಗಿ ನಕಲಿ ಕೊವಿಡ್ ಪರೀಕ್ಷಾ ಪ್ರಮಾಣಪತ್ರ ವಿತರಿಸುತ್ತಿದ್ದ ಖಾಸಗಿ ಲ್ಯಾಬ್‌ನ ಇಬ್ಬರು ಸಿಬ್ಬಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಾವಲ್ ಭೈರಸಂದ್ರದ ಸ್ಕೈಲೈನ್ ಡಯಾಗ್ನೊಸ್ಟಿಕ್ ಲ್ಯಾಬ್‌ನ ನೌಕರರು ಬಂಧಿತರಾಗಿದ್ದು, ಹೊರ ರಾಜ್ಯಗಳಿಗೆ ತೆರಳುವ ಜನರಿಗೆ ಆರೋಪಿಗಳು ನಕಲಿ ಪ್ರಮಾಣಪತ್ರ ನೀಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 50ಕ್ಕೂ ಹೆಚ್ಚಿನ ನಕಲಿ ಕೊವಿಡ್ ವರದಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೊರೋನಾ ಸೋಂಕು ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮವಾಗಿ ರಾಜ್ಯದಿಂದ ಹೊರ ರಾಜ್ಯಗಳಿಗೆ ಪ್ರಯಣಿಸುವ ಹಾಗೂ ಆಗಮಿಸುವವರಿಗೆ ಕಡ್ಡಾಯವಾಗಿ ಕೊರೋನಾ ಪ್ರಮಾಣ ಪತ್ರ ಸಲ್ಲಿಕೆಗೆ ಸರ್ಕಾರ ಆದೇಶಿಸಿದೆ. ಈ ಪರಿಸ್ಥಿತಿಯನ್ನು ಲಾಭ ಮಾಡಿಕೊಳ್ಳಲು ಆರೋಪಿಗಳು, ಸರ್ಕಾರದ ಅನುಮತಿ ಪಡೆಯದೆ ಸ್ಕೈಲೈನ್ ಡಯಾಗ್ನೊಸ್ಟಿಕ್ ಲ್ಯಾಬ್‌ನ ಹೆಸರಿನಲ್ಲಿ ಸಾರ್ವಜನಿಕರಿಗೆ ಕೊವಿಡ್ ಪರೀಕ್ಷಾ ಪ್ರಮಾಣ ಪತ್ರ ವಿತರಿಸುತ್ತಿದ್ದರು. ತಮ್ಮ ಪರಿಚಿತರಿಂದ ಸಂಪರ್ಕಿಸುವ ಜನರಿಂದ ಹಣ ಪಡೆದು ಆರೋಪಿಗಳು, ಸ್ವ್ಯಾಬ್ ಸ್ಯಾಂಪಲ್ ಸಂಗ್ರಹಿಸದೆ ನೇರವಾಗಿ ಕೊವಿಡ್ ಪರೀಕ್ಷಾ ವರದಿಯನ್ನು ನೀಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.