Sunday, January 19, 2025

ಈ ರಾಜ್ಯದ ಆಸ್ತಿ ಸಿದ್ದರಾಮಯ್ಯ, ನಿಮ್ಮನ್ನು ಕಳೆದುಕೊಳ್ಳಲು ಇಷ್ಟವಿಲ್ಲ – ಸಚಿವ ಕೆ.ಎಸ್​.ಈಶ್ವರಪ್ಪ

ಶಿವಮೊಗ್ಗ: ಸಾಯಬೇಡ್ರಿ ಅಂತೀವಿ, ಇಲ್ಲ ನಾವು ಸಾಯೋರೇ ಅಂತಾ ಚಂಡಿ ಹಠ ಹಿಡಿದ್ರೆ ಏನು ಮಾಡೋಣ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಅವರಿಗೆ ಪ್ರಾರ್ಥನೆ ಮಾಡ್ತೀನಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​​ ಈಶ್ವರಪ್ಪ ಅವರು ಶುಕ್ರವಾರ ಹೇಳಿದರು.

ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್​ ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿಂದತೆ ಶಿವಮೊಗ್ಗದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ನೀವು ಇಬ್ಬರೇ ಪಾದಯಾತ್ರೆ ಹೋಗ್ತೀವಿ ಅಂತೀರಾ? ನೀವು ಇಬ್ಬರೇ ಹೋಗಿ ಏಕೆ ಸಾಯ್ತೀರಿ! ನೀವು ಇಬ್ಬರೇ ಹೋಗ್ತೀವಿ ಅಂದ್ರೆ ನಿಮ್ಮ ಕಾರ್ಯಕರ್ತರು ಬಿಡುವುದಿಲ್ಲ. ನಾಳೆ ತಾಲೂಕು  ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ, ಅಸ್ಲೆಂಬಿ ಚುನಾವಣೆ ಇದೆ. ಇವರ ಎದುರಿಗೆ ಶೋ ಮಾಡಬೇಕು ಅಂತಾ ತುಂಬಾ ಜನ ಬರುತ್ತಾರೆ. ಸುಮ್ಮ ಸುಮ್ಮನೆ ನೀವು ಏಕೆ ಸಾಯ್ತೀರಾ? ಅವರನ್ನು ಏಕೆ ಸಾಯಿಸುತ್ತೀರಾ!? ನಾವು-ನೀವು ಒಟ್ಟಿಗೆ ಸಂತೋಷವಾಗಿ ಜೀವನ ಮಾಡೋಣ. ರಾಜಕಾರಣ ಮಾಡುವ ಸಲುವಾಗಿ ಮಾಡಲೇ ಬೇಕು ಅಂತಾ ಹಠ ಹಿಡಿದರೇ ನನ್ನ ಅಭ್ಯಂತರ ಏನಿಲ್ಲ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷಕ್ಕೆ ಹೋರಾಟ ಮಾಡುವ ಅವಕಾಶ ಇದೆ. ರಾಜಕಾರಣಗೋಸ್ಕರ ಕಾಂಗ್ರೆಸ್​ನವರು ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ರಾಜ್ಯದ ಜನ ಯೋಚನೆ ಮಾಡುತ್ತಿದ್ದಾರೆ ಎಂದಿದ್ದಾರೆ.

ಅಧಿಕಾರದಲ್ಲಿ ಇದ್ದಾಗ ಏಕೆ ಕೃಷ್ಣಾ, ಕಾವೇರಿ, ಮೇಕೆದಾಟು ಏಕೆ ಎಲ್ಲಾ ಮರೆತು ಹೋಗಿತ್ತು. ಕೇಂದ್ರದಲ್ಲಿ ಸಾಕಷ್ಟು ವರ್ಷ ಅಧಿಕಾರದಲ್ಲಿ ಇದ್ರಿ. ರಾಜ್ಯದಲ್ಲಿ ಆಡಳಿತ ನಡೆಸಿದವರು ನೀವೇ. ಆಗ ಏಕೆ ಕೃಷ್ಣಾ, ಕಾವೇರಿ, ಮೇಕೆದಾಟು ಏಕೆ ಮಾಡಲಿಲ್ಲ. ಕೇಂದ್ರದಲ್ಲಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತಿದ್ದಾಗೆ ನಿಮಗೆ ಕೃಷ್ಣಾ, ಕಾವೇರಿ, ಮೇಕೆದಾಟು ಎಲ್ಲಾ ನೆನಪು ಆಗಿವೆ. ನೀವು ಹೋರಾಟ ಮಾಡಿ ನನ್ನ ಅಭ್ಯಂತರ ಇಲ್ಲ. ನೀವು ಹೋರಾಟ ಮಾಡುತ್ತಿರಬೇಕು, ನಾವು ಅಧಿಕಾರದಲ್ಲಿ ಇರಬೇಕು. ನೀವು ವಿರೋಧ ಪಕ್ಷದಲ್ಲಿ ಇರಬೇಕು. ಈ ಹೋರಾಟವನ್ನು ಕೋವಿಡ್ ಆದ ಮೇಲೆ ಮಾಡಿ, ನೀವು ಬದುಕ್ರಿ. ದೇಶದಲ್ಲಿ, ರಾಜ್ಯದಲ್ಲಿ ವಿರೋಧ ಪಕ್ಷ ಇರಬೇಕು. ಇವತ್ತು ವಿರೋಧ ಪಕ್ಷವೇ ಇಲ್ಲದ ಹಾಗೆ ಆಗಿ ಹೋಗಿದೆ. ಅಧಿಕೃತವಾಗಿ ಕೇಂದ್ರದಲ್ಲಿ ವಿಪಕ್ಷ ಇಲ್ಲ. ರಾಜ್ಯದಲ್ಲಿ ನಾಳೆ ಚುನಾವಣೆ ಎದುರಾದರೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ವಿಪಕ್ಷದಲ್ಲಿ ಇರುವ ಪರಿಸ್ಥಿತಿ ಇಲ್ಲ. ಮೇಕೆದಾಟು ವಿಷಯದಲ್ಲಿ ನಮ್ಮ ಕಣ್ಣು ತೆರೆಸಿದ್ದೀರಾ. ಖಂಡಿತಾ ಕೇಂದ್ರದಿಂದ ಏನೇನು ಮಾಡಬೇಕು ಅದನ್ನು ಮಾಡುತ್ತೇವೆ. ಆದರೆ, ಬದುಕಿದ್ದು ಹೋರಾಟ ಮಾಡ್ರಿ. ನೀವು ಬಿಗಿ ಮಾಡಿದ್ರೆ ಇಬ್ಬರು ಪಾದಯಾತ್ರೆ ಮಾಡ್ತೀವಿ ಅಂತೀರಾ? ನಾವೇಕೆ ಬಿಗಿ ಮಾಡಬೇಕು. ನೀವು ಮುಖ್ಯಮಂತ್ರಿ ಆಗಿದ್ದವರು, ಸರ್ಕಾರ ನಡೆಸಿರುವವರು. ಆ ಸಂದರ್ಭದಲ್ಲಿ ಈ ರೀತಿ ನಡೆದಿತ್ತಾ? ಮುಖ್ಯಮಂತ್ರಿ ಆಗಿದ್ದಂತಹ ಸಂದರ್ಭದಲ್ಲಿ, ಲಾಕ್​ಡೌನ್, ಕಫ್ಯೂ ಇದ್ದಾಗ ನೀವು ಏನೇನು ಮಾಡಿದ್ರಿ ನೆನಪಿದೆಯಾ ನಿಮಗೆ ಎಂದು ಕಾಂಗ್ರೆಸ್​ ಪ್ರಶ್ನೆ ಮಾಡಿದರು.

ಅಲ್ಲದೇ, ನೀವು ಜೈಲಿಗೆ ಬೇಕಾದ್ರೂ ಕಳುಹಿಸಿ, ನಾವು ಮಾಡೇ ಮಾಡುವವರು ಅಂದ್ರೆ, ಇಂತಹ ಪದಗಳನ್ನು ನಾವು ಬಹಳ ಕೇಳಿದ್ದೀವಿ. ಇದು ಪೌರುಷದ ಮಾತುಗಳು. ಕೋವಿಡ್ ಸಂದರ್ಭದಲ್ಲಿ ಪೌರುಷದ ಮಾತು ಬೇಡ. ಕೋವಿಡ್ ಹೋದ ಮೇಲೆ ಪೌರುಷದ ಮಾತು ಹೇಳಿ ನಾವು ಬೇಡ ಅನ್ನುವುದಿಲ್ಲ. ನನ್ನ ಮಾತು ಅವರಿಗೆ ಎಷ್ಟರಮಟ್ಟಿಗೆ ಹಿಡಿಸಿತ್ತೋ, ಬೇಜಾರು ಆಗುತ್ತದೋ ಗೊತ್ತಿಲ್ಲ. ಎಲ್ಲಾ ಹಿರಿಯರು ನಮ್ಮ ರಾಜ್ಯದ ಆಸ್ತಿ. ದೇವೇಗೌಡರು, ಯಡಿಯೂರಪ್ಪ, ಸಿದ್ದರಾಮಯ್ಯ ಇವರೆಲ್ಲಾ ನಮ್ಮ ರಾಜ್ಯದ ಆಸ್ತಿ. ಇವರು ಯಾರೂ ಕೂಡಾ ಜನರ ವಿರೋಧ ಮಾಡಿದವರು ಅಲ್ಲ. ಇವೆರೆಲ್ಲಾ ನಮ್ಮ ಆಸ್ತಿ, ನಮ್ಮ ರಾಜ್ಯದ ಆಸ್ತಿ ಕಳೆದುಕೊಳ್ಳಲು ಇಷ್ಟವಿಲ್ಲ. ಕೋವಿಡ್ ಸಂದರ್ಭದಲ್ಲಿ ನಿಮ್ಮ ಹೋರಾಟ ನಿಲ್ಲಿಸಿ ಎಂದು ಕೈ ಮುಗಿದು ಪ್ರಾರ್ಥನೆ ಮಾಡ್ತೀನಿ. ಚುನಾವಣೆ ಬರುವವರೆಗೂ ಹೋರಾಟ ಮಾಡ್ತೀವಿ. ಆಮೇಲೆ ಜನರಿಗೆ ಏನಾದ್ರೂ ಆಗಲಿ ಅಂತಾ ಮನೋಭಾವನೆ. ಜನರ ಬಗ್ಗೆ, ಮತದಾರರ ಬಗ್ಗೆ ನಿಮಗೆಷ್ಟು ಆಸಕ್ತಿ ಇದೆಯೋ, ನಮಗೆ ಅದಕ್ಕಿಂತ 10 ಪಟ್ಟು ಆಸಕ್ತಿ ಇದೆ. ಸರ್ಕಾರ ಮೇಕೆದಾಟು ಯೋಜನೆಯನ್ನು ಮಾಡೇ ಮಾಡ್ತೀವಿ. ಅವರು ಹೋರಾಟ ಮಾಡಿದ್ರೆ ಅಷ್ಟೇ ಮಾಡ್ತೀವಿ ಅಂತಲ್ಲ. ನಾವು ಮೇಕೆದಾಟು ಯೋಜನೆಯನ್ನು ಜಾರಿಗೆ ತರುವವರೇ.

RELATED ARTICLES

Related Articles

TRENDING ARTICLES