ಬೆಂಗಳೂರು : ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಕೊವಿಡ್ ನಿಯಂತ್ರಣ, ಬೆಂಗಳೂರು ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಲಾಯಿತು. ಬೆಂಗಳೂರು ಅಭಿವೃದ್ಧಿಗೆ 6 ಸಾವಿರ ಕೋಟಿ ವಿಶೇಷ ಅನುದಾನ ಬಿಡುಗಡೆ, ಅಂಬರೀಶ್ ಸ್ಮಾರಕ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ವಿಚಾರಗಳಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ರಾಜ್ಯದಲ್ಲಿ ಕೊವಿಡ್, ಒಮೈಕ್ರಾನ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಠಿಣ ನಿಯಮಗಳಿಗೆ ಸ್ವಪಕ್ಷ ಮತ್ತು ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯ ಆರಂಭದಲ್ಲಿ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ಬಿಸಿಬಿಸಿ ಚರ್ಚೆ ನಡೀತು. ಸಭೆಯ ಆರಂಭದಲ್ಲಿ ಸಚಿವ ಈಶ್ವರಪ್ಪ ಕೊವಿಡ್ ಮಾರ್ಗಸೂಚಿ ಬಗ್ಗೆ ಅಪಸ್ಪರ ಎತ್ತಿದ್ದರು.
ಬೆಂಗಳೂರಿನಲ್ಲಿ ಕೋವಿಡ್ ಪ್ರಕರಣಗಳಿವೆ. ಆದರೆ, ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಪಾಸಿಟಿವ್ ದರ ಕಡಿಮೆ ಇದೆ. ನಮ್ಮ ಶಿವಮೊಗ್ಗದಲ್ಲಿ ಕೋವಿಡ್ ಪ್ರಕರಣಗಳೇ ಇಲ್ಲ. ಅಲ್ಲದೇ ಇತ್ತೀಚೆಗೆ ಜನರ ಜೀವನ ಸುಧಾರಣೆ ಆಗ್ತಾ ಇದೆ. ಹೀಗಾಗಿ ಬೆಂಗಳೂರು ಬಿಟ್ಟು ಬೇರೆ ಕಡೆ ನಿಯಮಗಳನ್ನ ಸಡಿಲಿಕೆ ಮಾಡಿ ಎಂದು ಒತ್ತಾಯ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸದ್ಯಕ್ಕೆ ಅಗಲ್ಲ, ಒಂದು ಪಕ್ಷ ನಾವು ಸಡಿಲಿಕೆಗೆ ಮುಂದಾದ್ರೆ ಕಾಂಗ್ರೆಸ್ ಅಡ್ವಾಂಟೇಜ್ ತಗೆದುಕೊಳ್ಳುತ್ತದೆ.ಇದಲ್ಲದೆ 14 ಅಥವಾ 15 ರಂದು ತಜ್ಞರ ಜೊತೆ ಸಭೆ ನಡೆಸಿ ತೀರ್ಮಾನ ಮಾಡಿ ನಂತರ ಮರು ಪರಿಶೀಲನೆ ನಿರ್ಧಾರ ಮಾಡೋಣ ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.
ಇದೇ ವೇಳೆ ಸಚಿವ ಸಂಪುಟ ಸಭೆಯಲ್ಲಿ ಹೆಬ್ಬಾಳ ಫ್ಲೈ ಓವರ್ ಅಭಿವೃದ್ಧಿಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬೆಂಗಳೂರು ಅಭಿವೃದ್ಧಿ ಸಿಎಂ ಅಮೃತ ಯೋಜನೆ ಅಡಿ ಬಿಬಿಎಂಪಿ ಹೆಚ್ಚುವರಿಯಾಗಿ ಮೂರು ವರ್ಷಕ್ಕೆ ಆರು ಸಾವಿರ ಕೋಟಿ ಬಿಡುಗಡೆ ಮಾಡಿದೆ. ಆಯುಷ್ ಇಲಾಖೆಯಲ್ಲಿ ಶುಶ್ರೂಷಕರ ನೇಮಕಾತಿ ನಿಯಮಗಳಿಗೆ ಅನುಮೋದನೆ ನೀಡಿರುವ ಸಚಿವ ಸಂಪುಟ ಸಭೆ, ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ 12 ಕೋಟಿ ಅನುದಾನಕ್ಕೆ ಸಮ್ಮತಿ ನೀಡಿದೆ. ಅಲ್ಲದೇ ಬೆಂಗಳೂರು ಪೂರ್ವ ತಾಲ್ಲೂಕಿನ 22 ಕೆರೆಗಳು, ಹೊಸಕೋಟೆ ಕೆರೆಗೆ ನೀರು ತುಂಬಿಸಲು 93 ಕೋಟಿ ವೆಚ್ಚದ ಯೋಜನೆಗೆ ಸಮ್ಮತಿ, ಬಿಎಂಟಿಸಿಯಲ್ಲಿ 39 ಎಸಿ ಬಸ್ ಖರೀದಿಗೆ ಬದಲಾಗಿ 300 ಎಲೆಕ್ಟ್ರಾನಿಕ್ ಬಸ್ ಖರೀದಿ ಒಪ್ಪಿಗೆ. ಜೋಗ್ ಜಲಪಾತ ಅಭಿವೃದ್ಧಿಗೆ ಪಿಪಿಇ ಅಡಿ ರೋಪ್ ವೇ, ಫೈವ್ ಸ್ಟಾರ್ ಹೋಟೆಲ್ ನಿರ್ಮಾಣಕ್ಕೆ 116 ಕೋಟಿ ನೀಡಲು ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದೆ.
ಒಟ್ಟಿನಲ್ಲಿ ಒಂದು ರಾಜ್ಯದಲ್ಲಿ ಕೊವಿಡ್, ಒಮೈಕ್ರಾನ್ ಕಂಟ್ರೋಲ್‌ಗೆ ತೆಗೆದುಕೊಂಡ ನಿರ್ಣಯದ ಬಗ್ಗೆ ಸಂಪುಟ ಸದಸ್ಯರೇ ವಿರೋಧ ವ್ಯಕ್ತಪಡಿಸಿದ್ದು ಸರ್ಕಾರಕ್ಕೆ ಮುಜುಗರ ತರಿಸಿದೆ. ಇನ್ನೊಂದು ಕಡೆ ಸರ್ಕಾರ ಬಿಬಿಎಂಪಿ ಚುನಾವಣೆ ಮೇಲೆ ಕಣ್ಣಿಟ್ಟಿದ್ದು, ಬೆಂಗಳೂರಿಗೆ ಭರ್ಜರಿ ಹಣವನ್ನ ಬಿಡುಗಡೆ ಮಾಡಿದೆ.