ರಾಜ್ಯ ಸರಕಾರದ ಕಠಿಣ ನಿರ್ಬಂಧದ ನಡುವೆಯೂ ಮೇಕೆದಾಟು ಪಾದಯಾತ್ರೆಯನ್ನು ನಿಗದಿಯಂತೆ ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ಈ ನಡುವೆ ಸರಕಾರ ಮಾರ್ಗಸೂಚಿ ಪಾಲಿಸದಿದ್ದರೆ ಕಾನೂನು ರೀತಿ ಕ್ರಮವಾಗಲಿದೆ ಎಂಬ ಎಚ್ಚರಿಕೆ ಸಂದೇಶವನ್ನು ಸರಕಾರ ರವಾನಿಸಿದೆ. ಹಾಗಾಗಿ ಪಾದಯಾತ್ರೆ ರಾಜಕೀಯ ಸಂಘರ್ಷಕ್ಕೆ ತಿರುಗುವ ಸಾಧ್ಯತೆಯಿದೆ. ಜ. 9 ರಿಂದ 19ರ ವರೆಗೆ ಪಾದಯಾತ್ರೆ ನಿಗದಿಯಾಗಿದೆ.
ಪಾದಯಾತ್ರೆಯ ಜಂಟಿ ಹೇಳಿಕೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಇದು ನೀರಿನ ಹಕ್ಕಿಗಾಗಿನ ಹೋರಾಟ, ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಮೇಕೆದಾಟು ಪಾದಯಾತ್ರೆ ಸಂಬಂಧ ಕಳೆದೊಂದು ತಿಂಗಳಿಂದ ಕಾಂಗ್ರೆಸ್ ಸಿದ್ಧತೆಯಲ್ಲಿ ತೊಡಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಿರಿ, ಕಿರಿಯ ಮುಖಂಡರನ್ನು ಜತೆಗೂಡಿಸಿಕೊಂಡು ಹೋಗುತ್ತಿದ್ದಾರೆ. ಆದರೆ, ಕೊರೊನಾ ಹಿನ್ನೆಲೆಯಲ್ಲಿ ಯಾವುದೇ ರಾಜಕೀಯ ಸಮಾವೇಶ, ಸಭೆ, ಸಮಾರಂಭ, ಪ್ರತಿಭಟನೆ ನಡೆಸುವಂತಿಲ್ಲ ಎಂದು ಸರಕಾರ ನಿರ್ಬಂಧ ಹೇರಿದೆ.