ಬೆಂಗಳೂರು : ಸಶಸ್ತ್ರ ಸೇನಾಪಡೆಗಳ ಮೊದಲ ಮುಖ್ಯಸ್ಥ ಜನರಲ್.ಬಿಪಿನ್ ರಾವತ್, ಅವರ ಪತ್ನಿ ಸೇರಿದಂತೆ 14 ಜನರ ಸಾವಿಗೆ ಕಾರಣವಾದ ಸೇನಾ ಹೆಲಿಕಾಪ್ಟರ್ ಅವಘಡಕ್ಕೆ ತಾಂತ್ರಿಕ ದೋಷ ಅಥವಾ ಒಳಸಂಚು ಕಾರಣವಲ್ಲ ಎಂದು ತಿಳಿದುಬಂದಿದೆ.
ಬದಲಿಗೆ ಕೆಟ್ಟ ವಾತಾವರಣವೇ ಈ ದುರ್ಘಟನೆಗೆ ಕಾರಣ ಎಂಬ ತೀರ್ಮಾನಕ್ಕೆ ತನಿಖಾ ತಂಡ ಬಂದಿದೆ. ಕೂನೂರು ಬಳಿ ನಡೆದ ಈ ಸೇನಾ ಹೆಲಿಕಾಪ್ಟರ್ ಅಪಘಾತದ ಕುರಿತು ರಚಿಸಲಾಗಿದ್ದ ಏರ್ ಮಾರ್ಷಲ್ ಮನ್ವೀಂದರ್ ಸಿಂಗ್ ನೇತೃತ್ವದ ತಂಡ, ತನಿಖೆ ಪೂರ್ಣಗೊಳಿಸಿದ್ದು, ಅದರ ವಿಸ್ತೃತ ಮಾಹಿತಿಯನ್ನು ಬುಧವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡಿದೆ.
ಇದರಲ್ಲಿ ಜನರಲ್ ರಾವತ್ ಸೇರಿದಂತೆ 13 ಸೇನಾ ಸಿಬ್ಬಂದಿ ಜತೆ ಸೂಳೂರಿನಿಂದ ಹೊರಟಿದ್ದ ರಷ್ಯಾ ನಿರ್ಮಿತ ಅವಳಿ ಇಂಜಿನ್ ಎಂ-17ವಿ5 ಹೆಲಿಕಾಪ್ಟರ್ ದುರಂತಕ್ಕೆ ಯಾವುದೇ ಒಳಸಂಚು ಅಥವಾ ತಾಂತ್ರಿಕ ದೋಷ ಕಾರಣವಿರಬಹುದು ಎಂಬ ಅಂಶಗಳನ್ನು ತನಿಖಾ ತಂಡ ನಿರಾಕರಿಸಿದೆ ಎಂದು ಮೂಲಗಳು ತಿಳಿಸಿವೆ.