ನವದೆಹಲಿ: ಭತ್ತ, ಗೋವಿನ ಜೋಳ, ಕಬ್ಬು, ಬೆಳೆಗಳಿಂದ ಎಥನಾಲ್ ಉತ್ಪಾದನೆ ಮತ್ತು ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಮಸ್ಯೆ ಬಗೆಹರಿಸಲು ಹೆಚ್ಚಿನ ನೆರವು ನೀಡುವಂತೆ ರಾಜ್ಯ ಜವಳಿ, ಕೈಮಗ್ಗ ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಕೊಂಡಿದ್ದಾರೆ. ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಇಂದು ಕೇಂದ್ರದ ಜವಳಿ ಮತ್ತು ಸಕ್ಕರೆ ಸಚಿವರಾದ ಪಿಯೂಷ್ ಗೊಯೆಲ್ ಅವರನ್ನು ನವದೆಹಲಿಯ ಕೃಷಿಭವನದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.
ಕೇಂದ್ರ ಸಚಿವರ ಭೇಟಿಯಲ್ಲಿ ನೂತನ ಪರಿಸರ ಸ್ನೇಹಿ ಎಥನಾಲ್ ನೀತಿ ಬಗ್ಗೆ ಚರ್ಚೆ ನಡೆಸಿದ್ದಾರೆ. ನೂತನ ನೀತಿಯಿಂದ ಬೆಳೆಗಾರರು ಹಾಗೂ ಕಾರ್ಖಾನೆ ಮಾಲಿಕರು ಸೇರಿದಂತೆ ಎಲ್ಲರಿಗೂ ಲಾಭ ಆಗುತ್ತದೆ. ಇದೇ ಹಿನ್ನೆಲೆಯಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರದ ಎಥನಾಲ್ ಪಾಲಿಸಿಗಳನ್ನು ಮಾದರಿಯಾಗಿ ಇಟ್ಟುಕೊಂಡು ರಾಜ್ಯದಲ್ಲಿ ಎಥನಾಲ್ ನೀತಿ ಜಾರಿ ಮಾಡಿದ್ದೇವೆ. ಕೇಂದ್ರ ಸರ್ಕಾರ ಪೆಟ್ರೋಲ್ ಜೊತೆ ಶೇಕಡಾ 10ರಷ್ಟು ಎಥನಾಲ್ ಸೇರಿಸಬೇಕು ಎಂದು ಸೂಚನೆ ನೀಡಿದೆ. ಇದರಿಂದ ಪರಿಸರ ಮಾಲಿನ್ಯವೂ ನಿಯಂತ್ರಣಕ್ಕೆ ಬರಲಿದೆ. ಇದು ಕೂಡ ಎಥನಾಲ್ ಉತ್ಪಾದನೆಗೆ ಉತ್ತೇಜನ ನೀಡಲು ಸಾಧ್ಯವಿದೆ ಅಂತಾ ಅಭಿಪ್ರಾಯ ಪಟ್ಟಿದ್ದಾರೆ.
ಇದರ ಜೊತೆಗೆ, ಮೈಸೂರು ಮೆಗಾ ಸಿಲ್ಕ್ ಕ್ಲಸ್ಟರ್ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ್ದಾರೆ. ರಾಜ್ಯದ ರೇಷ್ಮೆ ಗುಣಮಟ್ಟಕ್ಕೆ ವಿಶ್ವದಾದ್ಯಂತ ಹೆಸರು ಪಡೆದಿದೆ, ಮೈಸೂರು ರೇಷ್ಮೆ ಸುತ್ತಲ ವಲಯಕ್ಕೆ ಕೇಂದ್ರ ಬಿಂದುವಾಗಿದೆ. ಇಲ್ಲಿ ರೇಷ್ಮೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ವಿಸ್ತರಿಸಬೇಕಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸಹಭಾಗಿತ್ವದ ಮೆಗಾ ಸಿಲ್ಕ್ ಕ್ಲಸ್ಟರ್ ಯೋಜನೆಯ ಅನುಷ್ಠಾನವಾಗಬೇಕು. ಹೀಗಾಗಿ ಕೇಂದ್ರ ಸರ್ಕಾರ ಈ ಹಿಂದೆ ಘೋಷಣೆ ಮಾಡಿದಂತೆ ಪೂರಕವಾದ ಅನುದಾನ ನೀಡಬೇಕು, ಯಾವುದೇ ಕಾರಣಕ್ಕೂ ಅನುದಾನ ನಿಲ್ಲಿಸಬಾರದು ಮತ್ತು ಕಡಿಮೆ ಮಾಡಬಾರದು ಎಂದು ಸಚಿವ ಶಂಕರ ಪಾಟೀಲ ಬಿ ಮುನೇನಕೊಪ್ಪ ಕೇಂದ್ರ ಸಚಿವ ಪಿಯೂಶ್ ಗೊಯೆಲ್ ಅವರಿಗೆ ಮನವಿ ಮಾಡಿದ್ದಾರೆ.
ಸಂತೋಷ್ ಹೊಸಹಳ್ಳಿ, ನವದೆಹಲಿ.