ಉತ್ತರಾಖಂಡ : ಬುಲ್ಲಿ ಬೈ ಆಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅನುಮಾನಾಸ್ಪದ ಮಹಿಳೆಯನ್ನು ಉತ್ತರಾಖಂಡದಲ್ಲಿ ಬಂಧಿಸಲಾಗಿದೆ. ಇಡೀ ಪ್ರಕರಣದಲ್ಲಿ ಮಹಿಳೆಯನ್ನು ಪ್ರಮುಖ ಆರೋಪಿ ಎಂದು ಪರಿಗಣಿಸಲಾಗಿದೆ. ಈ ವಿಷಯವು ಸೂಕ್ಷ್ಮವಾಗಿರುವುದರಿಂದ ಮಹಿಳೆಯನ್ನು ವಿಚಾರಣೆಗೊಳಪಡಿಸಲಾಗಿದೆ. ಇದಕ್ಕೂ ಮುನ್ನ ಮುಂಬೈ ಪೊಲೀಸರ ಸೈಬರ್ ಸೆಲ್ ವಿಶಾಲ್ ಕುಮಾರ್ ಝಾ ಎಂಬ 21 ವರ್ಷದ ಯುವಕನನ್ನು ಬಂಧಿಸಿತ್ತು. ಸಿವಿಲ್ ಇಂಜಿನಿಯರಿಂಗ್ ಓದುತ್ತಿರುವ ವಿಶಾಲ್ ನನ್ನು ಬುಲ್ಲಿ ಬೈ ಆಪ್ ಪ್ರಕರಣದಲ್ಲಿ ಬೆಂಗಳೂರಿನಿಂದ ಬಂಧಿಸಲಾಗಿತ್ತು.
ವಿಶಾಲ್ ಝಾ ಹೊರತುಪಡಿಸಿ, ಈ ಅಪ್ಲಿಕೇಶನ್ ಮಾಡುವಲ್ಲಿ ಪಾತ್ರ ವಹಿಸಿದವರು ಹಲವರು ಇದ್ದಾರೆ ಎಂದು ಮುಂಬೈ ಪೊಲೀಸ್ ತಿಳಿಸಿದ್ದಾರೆ. ಇದಲ್ಲದೆ, ಡಿಸೆಂಬರ್ 31 ರಂದು, ಬಂಧಿತ ಆರೋಪಿ ಈ ಆಪ್ ಹೆಸರನ್ನು ಸಿಖ್ ಸಮುದಾಯಕ್ಕೆ ಸಂಬಂಧಿಸಿದ ಹೆಸರಿಗೆ ಬದಲಾಯಿಸಿದ್ದಾರೆ ಹಾಗೂ ಅದನ್ನು ಸಿಖ್ ಫಾರ್ ಜಸ್ಟೀಸ್ ಸಿದ್ಧಪಡಿಸಿದೆ ಎಂಬಂತೆ ತೋರಿಸಲು ಯತ್ನಿಸಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ.
ವಿಶಾಲ್ ಮತ್ತು ಉತ್ತರಾಖಂಡದ ಮಹಿಳೆ ಸಾಮಾಜಿಕ ಮಾಧ್ಯಮದ ಮೂಲಕ ಸ್ನೇಹ ಹೊಂದಿದ್ದರು, ನಂತರ ಈ ಮಹಿಳೆ ಅವನನ್ನು ಬುಲ್ಲಿ ಆಪ್ಲಿಕೇಶನ್ಗೆ ಲಿಂಕ್ ಮಾಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಈ ಸಮಯದಲ್ಲಿ, ಆ ಮಹಿಳೆಯ ಇನ್ನೊಬ್ಬ ಸ್ನೇಹಿತ ಅಪರಾಧ ವಿಭಾಗದ ರೇಡಾರ್ನಲ್ಲಿದ್ದು, ಇದೀಗ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ತಲೆಮರೆಸಿಕೊಂಡಿರುವ ಆರೋಪಿಗಳ ಜತೆ ಉತ್ತರಾಖಂಡದ ಯುವತಿಯು ಕಾಲ್ಪನಿಕತೆಗಾಗಿ ಬುಲ್ಲಿ ಬೈ ಎಂಬ ಹೆಸರಿನ ಅಪ್ಲಿಕೇಷನ್ ಸೃಷ್ಟಿಸಿ ಮುಸ್ಲಿಂ ಸಮಾಜದ ಪ್ರತಿಷ್ಠಿತ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಾದ ಇನ್ಸ್ಟಾಗ್ರಾಮ್, ಟ್ವಿಟರ್, ಫೇಸ್ಬುಕ್ನಿಂದ ಡೌನ್ಲೋಡ್ ಮಾಡಿಕೊಂಡು, ಅವುಗಳನ್ನು ಬುಲ್ಲಿ ಬೈ ಅಪ್ಲಿಕೇಶನ್‌ನಲ್ಲಿ ಅಪ್‌ಲೋಡ್ ಮಾಡಿ, ಅಲ್ಲಿ ಅವರ ಬಿಡ್ಡಿಂಗ್ ನಡೆಸಲಾಗುತ್ತಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರು ದೂರು ಸಲ್ಲಿಸಿದಾಗ ಮುಂಬೈ ಪೊಲೀಸರ ಸೈಬರ್ ಸೆಲ್ ತಂಡ ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿಯ ಸೆಕ್ಷನ್ 354 ಡಿ, 509, 500, 153 ಎ, 295 ಎ, 153 ಬಿ, IT ಸೆಕ್ಷನ್ 67 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆಯನ್ನು ಆರಂಭಿಸಿದ್ದಾರೆ.