ಪ್ರತಿ ಹೆಣ್ಣಿನ ಜೀವನದಲ್ಲಿ ತಾಯ್ತನ ಅನ್ನೋದು ಆಕೆಯ ಕನಸು, ಆಕೆಯ ಜೀವನದ ಪ್ರಮುಖ ಘಟ್ಟ. ತುಂಬು ಗರ್ಭಿಣಿ ಸ್ಥಿತಿಗೆ ಬಂದಾಗ ಮನೆಯವರೆಲ್ಲಾ ಸೇರಿ ಮಾಡುವ ಸೀಮಂತ ಕಾರ್ಯಕ್ರಮ ತುಂಬಾನೇ ಸ್ಪೆಷಲ್ ಅನ್ನಿಸಿಕೊಳ್ಳುತ್ತೆ. ಆದರೆ ಈ ಸೀಮಂತದ ಭಾಗ್ಯ ಎಲ್ಲಾ ಮಹಿಳೆಯರಿಗೆ ಸಿಗೋದಿಲ್ಲ. ಕಾರಣ ಬಡತನದ ಜೊತೆಗೆ ನಾನಾ ಕಾರಣಗಳು. ಹೀಗಾಗಿ ಇದನ್ನು ಅರಿತು ಇವತ್ತು ಬಿಬಿಎಂಪಿ ಸಹಯೋಗದಲ್ಲಿ ಹಲವು ಸಂಘಟನೆಗಳು ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಆಯೋಜನೆ ಮಾಡಿದ್ದವು.
ವೇದಿಕೆ ಮೇಲೆ ಸಾಲು ಸಾಲಾಗಿ ಕುಳಿತಿರುವ ತುಂಬು ಗರ್ಭಿಣಿಯರು, ಹಣ್ಣು, ಸೀರೆ, ಸ್ವೀಟ್, ಅರಿಶಿನ, ಕುಂಕುಮ, ತರಹೇವಾರಿ ತಿಂಡಿ ತಿನಿಸುಗಳು..ಇನ್ನು ತುಂಬು ಗರ್ಭಿಣಿಯರಿಗೆ ಮಡಿಲು ತುಂಬುವ ಶಾಸ್ತ್ರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಖ್ಯಾತ ನಟಿ ಸುಧಾರಾಣಿ ಗರ್ಭಿಣಿಯರಿಗೆ ಮಡಿಲು ತುಂಬಿಸಿದ್ರು. ಇನ್ನು ಕಾರ್ಯಕ್ರಮಕ್ಕೆ ಹಿರಿಯ ಪ್ರಸೂತಿ ತಜ್ಞರಾದ ವಿದ್ಯಾ ಭಟ್, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ಬಿಜೆಪಿ ಮುಖಂಡ ಕಟ್ಟೆ ಸತ್ಯನಾರಾಯಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಮಡಿಲು ತುಂಬಿಸಿಕೊಂಡು ಸೀಮಂತ ಮಾಡಿಸಿಕೊಂಡ ಗರ್ಭಿಣಿಯರು ಸಂತೋಷ ವ್ಯಕ್ತಪಡಿಸಿದರು.
ಬಿಬಿಎಂಪಿ, ಕಟ್ಟೆ ಫೌಂಡೇಶನ್, ರಾಧಾಕೃಷ್ಣ ಆಸ್ಪತ್ರೆ ಸಹಯೋಗದಲ್ಲಿ ಎನ್.ಆರ್. ಕಾಲೋನಿಯಲ್ಲಿರುವ ಸಿ.ಅಶ್ವತ್ಥ್ ಕಲಾಭವನದಲ್ಲಿ ಸೀಮಂತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುಮಾರು 60 ಮಹಿಳೆಯರಿಗೆ ಮೀಸಲಿಟ್ಟಿದ್ದ ಕಾರ್ಯಕ್ರಮಕ್ಕೆ 78 ಗರ್ಭಿಣಿ ಮಹಿಳೆಯರು ಭಾಗಿಯಾಗಿ
ಕಾರ್ಯಕ್ರಮ ಯಶಸ್ವಿಗೊಳಿಸಿದರು.ಇದೇ ಮೊದಲ ಬಾರಿಗೆ ಈ ರೀತಿಯ ಕಾರ್ಯಕ್ರಮ ಹಮ್ಮಿಕೊಂಡಿದ್ದಕ್ಕೆ ನಟಿ ಸುಧಾರಾಣಿ ಮೆಚ್ಚುಗೆ ವ್ಯಕ್ತಪಡಿಸಿದ್ರು. ಒಟ್ಟಿನಲ್ಲಿ ನಮ್ಮ ಸಿಲಿಕಾನ್ ಸಿಟಿಯಲ್ಲಿ ನಿತ್ಯ ಹಲವಾರು ವಿವಿಧ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತದೆ. ಅದರ ನಡುವೆ ನಡೆದ ಈ ಸೀಮಂತ ಕಾರ್ಯಕ್ರಮ ಅರ್ಥಪೂರ್ಣವಾಗಿತ್ತು.
ಸ್ವಾತಿ ಪುಲಗಂಟಿ ಮೆಟ್ರೋ ಬ್ಯೂರೋ ಬೆಂಗಳೂರು