ಬೆಂಗಳೂರು: ಮಹಿಳೆಯೊಬ್ಬಳನ್ನು ಸಿನಿಮಾ ಸ್ಟೈಲ್ನಲ್ಲಿ ಒಲಿಸಿಕೊಳ್ಳಲು ಹೋಗಿ ಪೊಲೀಸ್ ಪಾಲಾದ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ. ಆರೋಪಿ ಯುವಕ ಮನೆಯೊಂದರ ಬಳಿ ಮಹಿಳೆಗೆ ನೀರು ಕೊಡುವಂತೆ ಕೇಳಿದ್ದಾನೆ. ಪಕ್ಕದ ಮನೆ ವ್ಯಕ್ತಿ ಎಂದು ಮಹಿಳೆ ನೀರು ಕೊಟ್ಟಿದ್ದಾಳೆ. ಆಗ ಯುವಕ ತನ್ನ ಸಿನಿಮಾ ವರಸೆ ತೆಗೆದಿದ್ದಾನೆ. ತನ್ನನ್ನು ತಾನು ಸಿನಿಮಾ ಹೀರೊ ಎಂದುಕೊಂಡು ಮಹಿಳೆ ನೀರು ಕೊಡ್ತಿದ್ದಂತೆ ನೀನು ಐಶ್ವರ್ಯಾ ರೈ ಥರಾ ಇದ್ದೀಯಾ, ನನ್ನ ಕಣ್ಣಲ್ಲಿ ಕಣ್ಣೀಟ್ಟು ನೋಡು ನಿನ್ನ ಪ್ರತಿಬಿಂಬ ಕಾಣತ್ತೆ ಎಂದಿದ್ದಾನೆ ಐಲುವೀರ.
ಆದರೆ ಅವನ ನಿರೀಕ್ಷೆಯಂತೆ ಅವನ ಮಾತಿಗೆ ಮಹಿಳೆ ಮರುಳಾಗಿ ಅವನನ್ನು ತಬ್ಬಿಕೊಳ್ಳುವ ಬದಲಾಗಿ ಜೋರಾಗಿ ಕೂಗಿಕೊಂಡಿದ್ದಾಳೆ. ಅವಳು ಕೂಗಿಕೊಳ್ಳುತ್ತಲೇ ಯುವಕನ ಭ್ರಮೆ ಇಳಿದು ಅಲ್ಲಿಂದ ಓಡಿಹೋಗಿದ್ದಾನೆ. ಪೀಣ್ಯಾ ಬಳಿಯ ದೊಡ್ಡಬಿದರಕಲ್ಲಿನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಆರೋಪಿ ಹನುಮಂತರಾಯನನ್ನು ಬಂಧಿಸಿದ್ದಾರೆ. ಇದೀಗ ಪೀಣ್ಯ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಕಿರುಕುಳದ ಅಡಿ ಪ್ರಕರಣ ದಾಖಲಾಗಿದೆ.
ಇಂದಿನ ಯುವಜನಾಂಗ ಸಿನಿಮಾಗಳಿಂದ ಪ್ರೇರೆಪಿತರಾಗಿ ಹೀರೋಗಳನ್ನೇ ಅನುಕರಿಸುತ್ತಿರುವುದು, ಸಿನಿನಾಯಕರನ್ನು ದೇವರಂತೆ ನೋಡುತ್ತಿರುವುದು ಅತಿರೇಕಕ್ಕೆ ಹೋಗಿದೆ. ಇದರಿಂದ ಬೇರೆನಾಗದಿದ್ದರೂ, ಸಿನಿಮಾ ಹೀರೋ ಹುಡುಗಿಯನ್ನ ರೇಗಿಸುವುದು, ಫೈಟ್ ಮಾಡಿ ಎದುರಿಗಿರುವವರ ಮೂಳೆ ಮುರಿಯುವುದು, ಕೊಲೆ ಮಾಡುವುದು ಇವೆಲ್ಲ ನಿಜಜೀವನದಲ್ಲೂ ಮಾಡಲು ಹೋಗಿ ಕೃಷ್ಣ ಜನ್ಮಸ್ಥಾನ ಸೇರುತ್ತಿರುತ್ತಿದ್ದಾರೆ.