ರಾಜ್ಯ : ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ ಪಾದಯಾತ್ರೆ ಹಮ್ಮಿಕೊಂಡಿರುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಮೇಕೆದಾಟು ಯೋಜನೆ ಪಾದಯಾತ್ರೆಯನ್ನು ರಾಜಕಾರಣಕ್ಕಾಗಿ ಎಂದು ಬಿಂಬಿಸುತ್ತಿದ್ದಾರೆ. ನಮಗೆ ಅಧಿಕಾರ ಒಂದೇ ಮುಖ್ಯವಲ್ಲ. ನಮಗೆ ಸಾಮಾಜಿಕ ಕಳಕಳಿಯಿದೆ. ಬಹುತೇಕ ವಿಷಯಗಳಲ್ಲಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಕಾಂಗ್ರೆಸ್ ಪಕ್ಷದ ಅಧಿಕಾರವಧಿಯಲ್ಲೂ ನಾವು ಹೋರಾಟ ಮಾಡಿದ್ದೇವೆ.
ಕುಡಿಯುವ ನೀರು ಯೋಜನೆಗೆ ಎನ್ ಒ ಸಿ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಕೇವಲ ಪರಿಸರ ಇಲಾಖೆಯ ಅನುಮತಿ ಅಗತ್ಯವಿದೆ. ಮೇಕೆದಾಟು ಯೋಜನೆಯ ಸ್ಥಳ ಒಂದು ಬೆಂಗಳೂರು, ಮತ್ತೊಂದು ಮೈಸೂರು ಜಿಲ್ಲೆಯನ್ನು ಒಳಗೊಂಡಿತ್ತು. ನಂತರದ ದಿನಗಳಲ್ಲಿ ರಾಮನಗರ, ಚಾಮರಾಜನಗರ ಜಿಲ್ಲೆಗಳ ವ್ಯಾಪ್ತಿಗೆ ಒಳಗೊಂಡಿದೆ. ರಾಮನಗರ ಜಿಲ್ಲೆಯ ಕನಕಪುರ ಹಾಗೂ ಚಾಮರಾಜನಗರ ಜಿಲ್ಲೆಯ ಹನೂರಿನ ನಡುವೆ ಈ ಯೋಜನೆ ಬರಲಿದೆ. ನಮ್ಮ ಪಾದಯಾತ್ರೆಗೆ ವ್ಯಾಪಕ ಟೀಕೆ ಕೇಳಿ ಬರುತ್ತಿದೆ. ಆದರೆ ನಾವು ಟೀಕೆಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.