ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ನಡೆದ ಚರ್ಚೆಯಲ್ಲಿ ಬಿಜೆಪಿ ಹೈಕಮಾಂಡ್ ಕರ್ನಾಟಕದ ಬಿಜೆಪಿ ಮುಖಂಡರನ್ನು ತರಾಟೆಗೆ ತೆಗೆದುಕೊಂಡಿದೆ ಎನ್ನಲಾಗಿದೆ. ರಾಜ್ಯ ಬಿಜೆಪಿ ಉಸ್ತುವಾರಿಯಾಗಿರುವ ಅರುಣ್ಸಿಂಗ್ ಬೆಳಗಾವಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯ ಸೋಲಿನ ಬಗ್ಗೆ ಸ್ಥಳೀಯ ಮುಖಂಡರನ್ನು ಹೊಣೆಯಾಗಿಸಿದರು. ಅರುಣ್ಸಿಂಗ್ ಪರೋಕ್ಷವಾಗಿ ಬೆಳಗಾವಿಯ ಪಲ್ಲಂಗ ಪುರಾಣದ ವಿಲನ್ ಆರ್ ಜೆ ಗೆ ಗಂಭೀರ ಎಚ್ಚರಿಕೆ ನೀಡಿದರು. ಇಷ್ಟೆಲ್ಲ ಮಂತ್ರಿಗಳು, ಶಾಸಕರು, ಎಲ್ಲದಕ್ಕೂ ಮಿಗಿಲಾಗಿ ನಮ್ಮದೇ ಸರ್ಕಾರವಿದ್ದರೂ ನಾವಿಲ್ಲಿ ಸೋತಿದ್ದೇಕೆ ಎಂದು ಖಡಕ್ಕಾಗಿ ಪ್ರಶ್ನಿಸಿದರು.
ದೆಹಲಿ ವರಿಷ್ಟರು ಸುಮ್ಮನೆ ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದುಕೊಳ್ಳಬೇಡಿ, ನಾವು ಎಲ್ಲವನ್ನೂ ಗಮನಿಸುತ್ತಿದ್ದೇವೆ. ಯಾರು ಎಷ್ಟೇ ದೊಡ್ಡವರಿರಲಿ ಶಿಸ್ತುಕ್ರಮ ಅನಿವಾರ್ಯ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿ ಮತ್ತು ಅವರ ಆಪ್ತರಿಗೆ ಅಚ್ಚರಿಕೆ ರವಾನಿಸಿದರು. ರಮೇಶ್ ಜಾರಕಿಹೊಳಿ ಪಲ್ಲಂಗ ಪುರಾಣದ ಕೇಸ್ ನಡೆಯುವಾಗ, ಅವರು ಆರೋಪಿ ಸ್ಥಾನದಲ್ಲಿದ್ದರೂ ಆಗ ಸಿಎಂ ಆಗಿದ್ದ ಬಿಎಸ್ವೈ ರಮೇಶ್ ಜಾರಕಿಹೊಳಿಯನ್ನು ಅದೆಲ್ಲ ತಲೆಕೆಡಿಸಿಕೊಳ್ಳಬೇಡಿ, ಚುನಾವಣೆ ಪ್ರಚಾರಕ್ಕೆ ಬನ್ನಿ ಎಂದು ಹೇಳಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಆದ್ದರಿಂದ ಅರುಣ್ಸಿಂಗ್ ಎಚ್ಚರಿಕೆ ಬರಿ ಆರ್.ಜೆ ಗಷ್ಟೇ ಅಲ್ಲ, ಬಿಎಸ್ವೈ ಸೇರಿದಂತೆ ಇನ್ನೂ ಹಲವು ನಾಯಕರಿಗೆ ಕೊಟ್ಟಿರುವ ಎಚ್ಚರಿಕೆ ಎಂದು ಹೇಳಲಾಗುತ್ತಿದೆ.
ಗುಜರಾತ್ನಲ್ಲಿ ಬಿಜೆಪಿ ಅಷ್ಟೊಂದು ವರ್ಷಗಳಿಂದ ಆಡಳಿತ ನಡೆಸುತ್ತಿದೆ. ಅಲ್ಲಿ ನಡೆಯದ ಗಲಾಟೆ, ಕರ್ನಾಟಕದ ಬಿಜೆಪಿಯಲ್ಲೇಕೆ ನಡೆಯುತ್ತದೆ ಎಂದು ಅರುಣ್ಸಿಂಗ್ ಕರ್ನಾಟಕದ ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ್ದಾರೆ. ಯಾವಾಗ ಯಾರು ಅಧಿಕಾರಕ್ಕೆ ಬಂದರೂ ಇಲ್ಲಿ ಕಚ್ಚಾಟವಾಗುತ್ತದೆ. ಇದು ಸರಿಯಲ್ಲ. ನಾಯಕತ್ವ ಬದಲಾವಣೆ, ಸಂಪುಟ ಪುನರ್ರಚನೆ ಹೈಕಮಾಂಡ್ ನೋಡಿಕೊಳ್ಳುತ್ತದೆ. ಅನಗತ್ಯವಾಗಿ ಮಾತನಾಡಿ ಪ್ರತಿಪಕ್ಷಗಳಿಗೆ ಆಹಾರವಾಗಬೇಡಿ ಎಂದು ಪರೋಕ್ಷವಾಗಿ ಈಶ್ವರಪ್ಪ, ನಿರಾಣಿ ಹಾಗು ಯತ್ನಾಳ್ರವರಿಗೆ ಎಚ್ಚರಿಕೆ ನೀಡಿದರು.
ಓಂಪ್ರಕಾಶ್ ನಾಯಕ್, ಪವರ್ ಟಿವಿ