ಚಳಿಗಾಲದಲ್ಲಿ ಬಟಾಣಿಯನ್ನ ಹೆಚ್ಚಾಗಿ ಬೆಳೆಯುತ್ತಾರೆ. ಹಸಿ ಬಟಾಣಿ ಕಾಳುಗಳು ತಿನ್ನಲು ಎಷ್ಟು ರುಚಿ ಇರುತ್ತೋ ಹಾಗೆ ಆರೋಗ್ಯವನ್ನ ಅಷ್ಟೇ ಚೆನ್ನಾಗಿ ಕಾಪಾಡುತ್ತೆ. ಬಟಾಣಿಗಳನ್ನು ಅನೇಕ ಪಾಕವಿಧಾನಗಳಲ್ಲಿ ಬಳಸಲಾಗುತ್ತೆ. ಇನ್ನು ಚಳಿಗಾಲ ಆಗಿರೋದ್ರಿಂದ ಮಾರುಕಟ್ಟೆಯಲ್ಲಿ ಅಧಿಕವಾಗಿ ಮಾರಾಟ ಮಾಡಲಾಗುತ್ತೆ. ಬಟಾಣಿ ತಿನ್ನುವುದರಿಂದ ಆಗುವ ಲಾಭಗಳು ನಿಮಗೆ ಗೊತ್ತಾ?
ಹೌದು, ಬಟಾಣಿಯಲ್ಲಿ ಕಂಡುಬರುವ ಪೋಷಕಾಂಶಗಳು ನಮ್ಮ ದೇಹದ ಅನೇಕ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತೆ. ಹಸಿ ಬಟಾಣಿಯಲ್ಲಿ ವಿಟಮಿನ್ ಎ, ವಿಟಮಿನ್ ಬಿ, ವಿಟಮಿನ್ ಸಿ, ಆಂಟಿಆಕ್ಸಿಡೆಂಟ್, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಕಂಡುಬರುತ್ತವೆ. ಇಷ್ಟು ಸಣ್ಣ ಪ್ರಮಾಣದ ಕಾಳುಗಳಲ್ಲಿ ಏನೆಲ್ಲಾ ಲಾಭ ಇದೆ ಅಲ್ವಾ..?
ಹಸಿ ಬಟಾಣಿ ತಿನ್ನುವ ಪ್ರಯೋಜನಗಳು
- ಜೀರ್ಣಕ್ರಿಯೆ: ಹಸಿ ಬಟಾಣಿ ತಿನ್ನುವುದರಿಂದ ಜೀರ್ಣಕ್ರಿಯೆ ಹೆಚ್ಚಿಸುತ್ತೆ. ಬಟಾಣಿಯಲ್ಲಿ ಹೆಚ್ಚಾಗಿ ನಾರಿನ ಅಂಶ ಇರೋದ್ರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ನಿಮ್ಮ ದೇಹದಲ್ಲಿ ಅಜೀರ್ಣತೆ ಹಾಗೆ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡುವಲ್ಲಿ ನಾರಿನಾಂಶ ಸಹಾಯ ಮಾಡುತ್ತದೆ.
- ಮಧುಮೇಹ: ಹಸಿ ಬಟಾಣಿ ಕಾಳುಗಳಲ್ಲಿ ಗ್ಲೈಸೆಮಿಕ್ ಕಡಿಮೆ ಇರೋದ್ರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಬಟಾಣಿಯಲ್ಲಿ ಕಂಡುಬರುವ ಪೋಷಕಾಂಶಗಳು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಬೊಜ್ಜು: ನಾರಿನ ಅಂಶ ಹೆಚ್ಚಾಗಿ ಇರೋದ್ರಿಂದ ತೂಕ ನಷ್ಟಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಬಟಾಣಿಯಲ್ಲಿ ಕೊಬ್ಬಿನ ಅಂಶ ಮತ್ತು ಕ್ಯಾಲೋರಿಗಳ ಪ್ರಮಾಣವು ಕಡಿಮೆ ಇರೋದ್ರಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ತ್ವಚೆಯ ಕಾಂತಿ: ಬಟಾಣಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದರ ಜೊತೆಗೆ ತ್ವಚೆಯ ಆರೋಗ್ಯಕ್ಕೆ ಸಹಕಾರಿ ಎನಿಸುವ ವಿಟಮಿನ್ ಬಿ6, ವಿಟಮಿನ್ ಸಿ ಮತ್ತು ಫೋಲೆಟ್ ಅಂಶಗಳು ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತವೆ. ದೇಹದ ಉರಿಯೂತವನ್ನು ಕಡಿಮೆ ಮಾಡಿ ಫ್ರೀ ರಾಡಿಕಲ್ಗಳ ವಿರುದ್ಧ ಹೋರಾಡಿ ಚರ್ಮಕ್ಕೆ ಯಾವುದೇ ಬಗೆಯ ತೊಂದರೆಗಳು ಉಂಟಾಗದಂತೆ ಕಾಪಾಡುತ್ತವೆ. ಅಲ್ಲದೆ ಚರ್ಮದ ಭಾಗದಲ್ಲಿ ಸಣ್ಣ ವಯಸ್ಸಿಗೆ ಗೆರೆಗಳು ಮತ್ತು ಸುಕ್ಕುಗಳು ಕಂಡು ಬಂದು ನಿಮ್ಮನ್ನು ವಯಸ್ಸಾದವರಂತೆ ಮಾಡುವ ಪ್ರಕ್ರಿಯೆ ತಪ್ಪುತ್ತದೆ.