Monday, November 25, 2024

ಮಲೆನಾಡಿನಲ್ಲಿ ಕಣ್ಮನ ಸೆಳೆದ ಕಪ್ಪೆ ಹಬ್ಬ..!

ಶಿವಮೊಗ್ಗ : ಶರಾವತಿ ಹಿನ್ನೀರಿನ ಸುಂದರ ಪ್ರದೇಶ. ದಟ್ಟ ಅರಣ್ಯ ಕಾಡು. ಆ ಕಾಡಿನ ಸುಂದರ ಪರಿಸರದ ನಡುವೆ, ಅರಣ್ಯ ಇಲಾಖೆ ಅಧಿಕಾರಿಗಳು ಬಹಳ ಅಪರೂಪವಾದ ಒಂದು ಕಾರ್ಯಕ್ರಮ ಆಯೋಜಿಸಿದ್ದರು. ಶರಾವತಿಯ ಕಣಿವೆಯಲ್ಲಿ ನಡೆದ ಆ ಹಬ್ಬಕ್ಕೆ ಪರಿಸರ ಪ್ರೇಮಿಗಳು ಹಾಗೂ ಜನ ಫುಲ್ ಫಿದಾ ಆಗಿದ್ದರು.

ಮಲೆನಾಡಿನ ಹಚ್ಚ ಹಸಿರಿನ ಸುಂದರ ಪರಿಸರ. ದಟ್ಟ ಕಾನನದ ನಡುವೆ, ಕಣ್ಮನ ಸೆಳೆಯುವ ಶರಾವತಿ ಕಣಿವೆ. ನೋಡಿದಷ್ಟೂ ದೂರ ಕಾಣುವ ವಿಶಾಲವಾದ ತಿಳಿ ನೀರ ಸರೋವರದಂತೆ, ಕಂಗೊಳಿಸುವ ಶರಾವತಿ ಹಿನ್ನೀರಿನ ವೈಭೋಗ. ಕೆಂಪು ಮಣ್ಣಿನ ರಾಶಿಯಂತಿರುವ ನಡುಗಡ್ಡೆಯ ನೆತ್ತಿಯಲ್ಲಿ ಹಚ್ಚ ಹಸಿರು ಮರಗಳು. ಐದಾರು ದಶಕಗಳಿಂದ ನೀರಿನಲ್ಲಿ ಮುಳುಗಿ ಏಳುತ್ತಾ ಅಚ್ಚಳಿಯದೇ ನಿಂತಿರುವ ಸಾವಿರಾರು ಮರದ ಬೊಡ್ಡೆಗಳು. ಸುಂದರ ರೊಮ್ಯಾಂಟಿಕ್ ಪ್ರದೇಶ.

ಹೌದು,ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮುಪ್ಪಾನೆ ಎಂಬ ಅರಣ್ಯ ಪ್ರದೇಶ, ಕಪ್ಪೆಗಳ ನೆಲೆಬೀಡು. ಹೀಗಾಗಿ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು, ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಕಪ್ಪೆ ಹಬ್ಬವನ್ನು ಆಯೋಜಿಸಿದ್ದಾರೆ. ಪಶ್ಚಿಮಘಟ್ಟದ ವಿಶಿಷ್ಟ ಜೀವಪ್ರಭೇದವಾದ ಕಪ್ಪೆಗಳ ಕುರಿತು ಹೊಸ ತಲೆಮಾರಿನಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಪ್ಪೆ ಹಬ್ಬವನ್ನು ಆಯೋಜಿಸಿದ್ದು, ಈ ಹಬ್ಬದಲ್ಲಿ, ಉಭಯವಾಸಿಗಳ ಕುರಿತು, ಪರಿಣಿತರ ವಿಚಾರ ಮಂಡನೆ, ಸಂವಾದ, ಸಾಕ್ಷ್ಯಚಿತ್ರ ಮತ್ತು ಛಾಯಾಚಿತ್ರಗಳ ಪ್ರದರ್ಶನ, ಫ್ರಾಗ್ ವಾಕ್ ಕುರಿತ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.

ಇನ್ನು ಜಗತ್ತಿನ ಅಪರೂಪದ ಕಪ್ಪೆ ಪ್ರಭೇದಗಳ ನೆಲೆಬೀಡಾಗಿರುವ ಶರಾವತಿ ಕಣಿವೆಯಲ್ಲಿಯೇ ಈ ಹಬ್ಬವನ್ನು ನಡೆಸಲಾಗುತ್ತಿರುವುದು, ಮಲೆನಾಡಿನ ಪಾಲಿಗೆ ಹೆಚ್ಚುಗಾರಿಕೆಯೇ ಸರಿ. ಕಪ್ಪೆಗಳ ಸಂತತಿಯ ವೈವಿಧ್ಯತೆ, ಜೀವ ವೈವಿಧ್ಯ ಸರಪಳಿಯಲ್ಲಿ ಅವುಗಳ ಮಹತ್ವ, ಜೀವ ವೈವಿಧ್ಯ ಸಮತೋಲನ ಕಾಪಾಡುವಲ್ಲಿ ಅವುಗಳ ಪಾತ್ರ ಮತ್ತು ಅವುಗಳ ಪರಿಸರದ ಕೊಡುಗೆ, ಸಂತತಿ ಸಂರಕ್ಷಣೆಯ ಕುರಿತಂತೆ ಇಲ್ಲಿ ವಿದ್ಯಾರ್ಥಿಗಳನ್ನು ಒಳಗೊಂಡಂತೆ, ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು. ಪ್ರಮುಖವಾಗಿ ಕೃಷಿಯಲ್ಲಿ ರಾಸಾಯನಿಕ ಬಳಕೆ, ಕಾಡು ನಾಶ, ಕಾಡಿನೊಳಗೆ ಮಾನವ ಹಸ್ತಕ್ಷೇಪ, ಹವಾಮಾನ ವೈಪರೀತ್ಯದಂತಹ ಕಾರಣಗಳಿಂದಾಗಿ ಪಶ್ಚಿಮಘಟ್ಟದ ಎಲ್ಲೆಡೆಯಂತೆ ಶರಾವತಿ ಕಣಿವೆಯಲ್ಲಿ ಕೂಡ ಉಭಯವಾಸಿಗಳ ಅಪರೂಪದ ಪ್ರಭೇದಗಳು ಅಳಿವಿನಂಚಿಲ್ಲಿವೆ. ಕಪ್ಪೆಗಳ ಅವಸಾನ ನಿಜಕ್ಕೂ ಆತಂಕದ ಬೆಳವಣಿಗೆಯಾಗಿದ್ದು, ಈ ಹಿನ್ನೆಲೆಯಲ್ಲಿ ವಿಶಿಷ್ಟ ಜೀವಿಯ ಸಂರಕ್ಷಣೆ ಮತ್ತು ಅದರ ಜೀವ ವೈವಿಧ್ಯದ ಮಹತ್ವದ ಕುರಿತು ಜನಜಾಗೃತಿಯ ಪ್ರಯತ್ನವಾಗಿ ಕಪ್ಪೆ ಹಬ್ಬ ಆಯೋಜಿಸಲಾಗಿತ್ತು.

ಒಟ್ಟಿನಲ್ಲಿ ವಿಶಿಷ್ಟ ಎಂಡೆಮಿಕ್ ಜೀವಿಗಳ ಕುರಿತ ಹಬ್ಬ, ಉತ್ಸವಗಳು ಅಲ್ಲಲ್ಲಿ ಆಗ್ಗಾಗ್ಗೆ ನಡೆಯುತ್ತಲೇ ಇರುತ್ತವೆ. ಅದರಂತೆ ಮಲೆನಾಡಿನ ಜಿಲ್ಲೆ ಶಿವಮೊಗ್ಗದಲ್ಲಿ ಕಪ್ಪೆಗಳ ಸಂತತಿ ಉಳಿಸುವ ನಿಟ್ಟಿನಲ್ಲಿ, ಉಭಯವಾಸಿಗಳ ಪ್ರಬೇಧದ ಕುರಿತು, ಮುಂದಿನ ಪೀಳಿಗೆ ತಿಳಿಸುವ ಮತ್ತು ಸಂತತಿ ಉಳಿಸುವ ನಿಟ್ಟಿನಲ್ಲಿ, ಶಿವಮೊಗ್ಗದ ವನ್ಯಜೀವಿ ವಲಯ, ಜಗತ್ತಿನ ಅಪರೂಪದ ಜೀವವೈವಿಧ್ಯದ ನೆಲೆ ಶರಾವತಿ ಕಣಿವೆಯಲ್ಲಿ ಅಲ್ಲಿನ ವಿಶಿಷ್ಟ ಜೀವ ಪ್ರಭೇಧ ಕಪ್ಪೆಯ ಕುರಿತು ಹಬ್ಬ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ.

RELATED ARTICLES

Related Articles

TRENDING ARTICLES