ಭಾರತ ಹಾಗು ಭೂತಾನ್ ಐತಿಹಾಸಿಕ ಹಾಗು ಪೌರಾಣಿಕ ಹಿನ್ನೆಲೆಯಿಂದ ಅತ್ಯಾಪ್ತ ರಾಷ್ಟ್ರಗಳು, ಬೌದ್ಧ ದರ್ಮದ ಕಾಲದಿಂದಲೂ ಭಾರತದೊಂದಿಗೆ ಧಾರ್ಮಿಕ ಸಂಬಂಧ ಹೊಂದಿರುವ ಈ ರಾಷ್ಟ್ರ, ಭಾರತಕ್ಕೆ ಅತ್ಯಾಪ್ತ ಮಿತ್ರ. ಈ ರಾಷ್ಟ್ರದ ಮೇಲೆ ಒಂದು ಕಾಲದಲ್ಲಿ ಚೀನಾ ಹಿಡಿತ ಸಾಧಿಸೋದಕ್ಕೆ ಕೂಡ ಪ್ರಯತ್ನ ಪಟ್ಟಿತ್ತು ಆದ್ರೆ ಅದು ಯಶಸ್ವಿಯಾಗಿರಲಿಲ್ಲ. ಹಾಗಾಗಿ ಮೊದಲೇ ಚೀನಾದ ನರಿ ಬುದ್ಧಿಯನ್ನ ಅರ್ಥ ಮಾಡಿಕೊಂಡಿದ್ದ ಭೂತಾನ್ ಭಾರತದ ಸ್ನೇಹ ಹಸ್ತವನ್ನ ಕೂಡ ಚಾಚಿತ್ತು. ಇನ್ನು ಭಾರತಕ್ಕೂ ಕೂಡ ತನ್ನ ಅಕ್ಕಪಕ್ಕದಲ್ಲಿರುವ ಸಣ್ಣಪುಟ್ಟ ರಾಷ್ಟ್ರಗಳೊಂದಿಗಿನ ಸಂಬಂಧ ಬಲ ಪಡಿಸೋದು ಮುಖ್ಯವಾಗಿತ್ತು, ಹಾಗಾಗಿ ಭೂತಾನ್ ಸ್ನೇಹಕ್ಕೆ ಭಾರತ ಹಲವು ದಶಕಗಳ ಹಿಂದೆ ಅಸ್ತು ಅಂತ ಹೇಳಿದೆ. ಹೀಗಾಗಿ ಈ ಎರಡು ರಾಷ್ಟ್ರದ ಸಂಬಂಧಗಳು ಈ ಹಿಂದಿನಿಂದ ಸಾಕಷ್ಟು ಬಲಿಷ್ಟವಾಗಿ ರೂಪುಗೊಂಡು ಬಂದಿದೆ.
ಆದ್ರೆ ಕೆಲ ವರ್ಷಗಳ ಹಿಂದೆ ಚೀನಾ ಭೂತಾನ್ನೊಂದಿಗೆ ಸಂಬಂಧ ಸುಧಾರಣೆಯ ಮಾತನಾಡಿತ್ತು. ಆದ್ರೆ ಜೊತೆಗೆ ಭಾರತ ಅಂತರಿಕ ಭದ್ರತೆಗೆ ಕೂಡ ಇದು ಅಪಾಯಕಾರಿ ಬೆಳವಣಿಗೆಯಾಗಿ ಕಂಡು ಬಂದಿತ್ತು.ಇದೇ ವೇಳೆಯಲ್ಲಿ ಮೊದಲ ಬಾರಿಗೆ ಪ್ರಧಾನಿಯಾದ ಮೋದಿ, ತಮ್ಮ ಮೊದಲ ವಿದೇಶ ಪ್ರವಾಸವನ್ನ ಭುತಾನ್ಗೆ ಕೈಗೊಂಡರು, ಈ ವೇಳೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದ ಪ್ರಧಾನಿ ಮೋದಿ. ಭೂತಾನ್ನಲ್ಲಿ ಹೂಡಿಕೆ, ಔಷಧಿ ಸಾಮಾಗ್ರಿ, ಆಹಾರ ಧಾನ್ಯಗಳ ರಪ್ತಿನ ಕುರಿತು ಚರ್ಚೆಯನ್ನ ನಡೆಸಿದ್ದರು. ಇದೇ ವೇಳೆ ಭೂತಾನ್ ಹಾಗು ಭಾರತದ ನಡುವೆ ಮತ್ತೆ ಸಂಬಂಧ ಸುಧಾರಿಸುತ್ತ ಹೆಜ್ಜೆ ಹಾಕಿದ್ದರು. ಇದಾದ ಬಳಿಕ ಭಾರತ ಹಾಗು ಭೂತಾನ್ ಮತ್ತೆ ಮಿತ್ರ ರಾಷ್ಟ್ರಗಳಾಗಿದ್ದವು.
ಹೀಗೆ ಕಳೆದ ಹಲವು ವರ್ಷಗಳಿಂದ ಭೂತಾನ್ ಹಾಗು ಭಾರತದ ನಡುವೆ ಉತ್ತುಮವಾದ ಬಾಂಧವ್ಯ ಏರ್ಪಟ್ಟಿದೆ. ಭಾರತ ಭೂತಾನ್ ಪ್ರಮುಖ ವ್ಯಾಪಾರ ಪಾಲುದಾರ ದೇಶವಾಗಿ ಹೊರಹೊಮ್ಮಿದೆ. ಎರಡು ದೇಶಗಳ ನಡುವೆ ಮುಕ್ತ ವ್ಯಾಪಾರ ಆಡಳಿತವಿದೆ. ಇದಲ್ಲದೇ ದ್ವಿಪಕ್ಷೀಯ ಸಂಬಂಧಗಳಲ್ಲಿ ಭಾರತವು ಭೂತಾನ್ನ ಅತಿದೊಡ್ಡ ವ್ಯಾಪಾರ ಮತ್ತು ಅಭಿವೃದ್ಧಿ ಪಾಲುದಾರನಾಗಿ ಮುಂದುವರೆದಿದೆ. ಇನ್ನು ಇತ್ತೀಚೆಗೆ ವಿಶ್ವದಾದ್ಯಂತ ಕೊವಿಡ್ ಪ್ರಕರಣಗಳು ಹೆಚ್ಚಾದಾಗ ಕೂಡ ಭಾರತ ಭೂತಾನ್ನ ನೆರವಿಗೆ ನಿಂತಿತ್ತು, ನರೇಂದ್ರ ಮೋದಿ ಸರ್ಕಾರ ಕೋವಿಡ್ -19 ಲಸಿಕೆಗಳ ಉಡುಗೊರೆಯನ್ನು ಸ್ವೀಕರಿಸಿದ ಮೊದಲ ದೇಶ ಕೂಡ ಇದೇ ಭೂತಾನ್. ಈ ವರ್ಷದ ಆರಂಭದಲ್ಲಿ ಜನವರಿಯಲ್ಲಿ, ಭೂತಾನ್ ಭಾರತದಿಂದ 1.5 ಲಕ್ಷ ಡೋಸ್ಗಳ ಕೋವಿಶೀಲ್ಡ್ ಲಸಿಕೆಯನ್ನು ಉಡುಗೊರೆಯಾಗಿ ಸ್ವೀಕರಿಸಿತ್ತು.
ಇದಾದ ಬಳಿಕ ಭೂತಾನ್ ಕೇಂದ್ರ ಸರ್ಕಾರದಿಂದ ಹೆಚ್ಚುವರಿ 4,00,000 ಕೋವಿಡ್-19 ಲಸಿಕೆಯನ್ನ ಪಡೆದಿತ್ತು. ಹೀಗಾಗಿ ಕೊರೋನಾ ಸೋಂಕಿನ ವಿರುದ್ಧ ರಾಷ್ಟ್ರವ್ಯಾಪಿ ಲಸಿಕಾ ಪ್ರಕ್ರಿಯೆಯನ್ನು ಭೂತಾನ್ ಸಕ್ರಿಯೆಗೊಳಿಸಿ ಕೊವಿಡ್ ಹರಡೋದನ್ನ ತಡೆಯೋದರಲ್ಲಿ ಯಶಸ್ವಿಯಾಗಿತ್ತು. ಈ ಬಗ್ಗೆ ಸ್ಮರಿಸಿರುವ ಭೂತಾನ್ನ ಪ್ರಧಾನಿ ಲೋಟೆ ತ್ಶೆರಿಂಗ್ ಕೃತಜ್ಞತೆಯನ್ನ ಕೂಡ ಸಲ್ಲಿಸಿದ್ದರು, ಇನ್ನು ಕಳೆದ ವರ್ಷ ಕೂಡ ಪ್ರಧಾನಿ ಮೋದಿ ಭೂತಾನ್ಗೆ ತೆರಳಿದ್ದಾಗ ಜಲವಿದ್ಯುತ್ ಕ್ಷೇತ್ರದ ಪಾಲುದಾರಿಕೆಯನ್ನು ವೈವಿಧ್ಯಗೊಳಿಸೋದಕ್ಕೆ ಹಾಗು ಬಾಹ್ಯಾಕಾಶ, ಶಿಕ್ಷಣದಲ್ಲಿ ವ್ಯಾಪಾರ ಮತ್ತು ಸಂಪರ್ಕವನ್ನು ಹೆಚ್ಚಿಸುವ ಕುರಿತು ಕೂಡ ಮಾತನಾಡಿದ್ರು.
ಇದೆಲ್ಲವನ್ನ ಗಮನದಲ್ಲಿಟ್ಟುಕೊಂಡಿದ್ದ ಭೂತಾನ ತನ್ನ ರಾಷ್ಟ್ರೀಯ ದಿನದ ಅಂಗವಾಗಿ, ಭೂತಾನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ನ್ಗಾಡಾಗ್ ಪೆಲ್ ಗಿ ಖೋರ್ಲೋ ನೀಡಿ ಗೌರವಿಸಿದೆ. ಈ ವೇಳೆ ಭೂತಾನ್ನ ಪ್ರಧಾನಿ ಲೋಟೆ ತ್ಶೆರಿಂಗ್ ಪ್ರಧಾನಿ ಮೋದಿ ಕೊವಿಡ್ ಸಂದರ್ಭದಲ್ಲಿ ನೀಡಿದ್ದ ನೆರವನ್ನ ಸ್ಮರಿಸಿದ್ದ ಬಹಳ ಗಮನಾರ್ಹವಾಗಿತ್ತು. ಇನ್ನು ಇದೇ ವೇಳೆ ಉಪಸ್ಥಿತರಿದ್ದ ಭೂತಾನ್ನ ಅರಸ ಜಿಗ್ಮೆ ಖೇಸರ್ ನಾಮ್ಗೈಲ್ ವಾಂಗ್ ಚುಕ್ ಕೂಡ ಪ್ರಧಾನಿ ಮೋದಿ ನೆರವಿಗೆ ಧನ್ಯವಾದವನ್ನಕೂಡ ತಿಳಿಸಿದ್ದಾರೆ.
ಸದ್ಯಕ್ಕೆ ಭೂತಾನ್ ಹಾಗು ಭಾರತದ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ. ಈ ಹಿನ್ನೆಲೆಯಲ್ಲಿ ಭೂತಾನ್ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನ ಮೋದಿಗೆ ನೀಡಿ ಗೌರವಿಸಿರೋದು ಜಾಗತಿಕವಾಗಿ ಗಮನ ಸೆಳೆದಿದೆ. ಮತ್ತೊಂದು ಕಡೆ ಭೂತಾನ್ನ ಈ ನಡೆ ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಭಾರತ ಹಾಗು ಭೂತಾನ್ನ ಈ ಸಂಬಂಧ ಚೀನಾದ ಬುಡಕ್ಕೆ ಬೆಂಕಿ ಬಿದ್ದಿರೋದಂತು ಸುಳ್ಳಲ್ಲ. ಅದೇನೆ ಇರಲಿ ಭೂತಾನ್ ರಾಜಕೀಯದಿಂದ ಹೊರಗೆ ನಿಂತು ಭಾರತದ ಪ್ರಧಾನಿಗೆ ಗೌರವವನ್ನ ಸೂಚಿಸಿದೆ. ಆ ಮೂಲಕ ಭಾರತ ಎಂತಹ ನಂಬಿಕಸ್ತ ರಾಷ್ಟ್ರ ಅನ್ನೋದನ್ನ ಈ ಮೂಲಕ ಜಗತ್ತಿಗೆ ಸಾರಿ ಹೇಳಿದೆ.