ಪಂಜಾಬ್: 90ರ ದಶಕದ ಭಾರತ ತಂಡದ ಖ್ಯಾತ ಕ್ರಿಕೆಟ್ ಆಟಗಾರ ಹರ್ಭಜನ್ ಸಿಂಗ್ ಯಾರಿಗೆ ಗೊತ್ತಿಲ್ಲ ಹೇಳಿ? ತನ್ನ ಬೌಲಿಂಗ್ ಕೌಶಲ್ಯದಿಂದಲೇ ಎಷ್ಟೋ ಬಾರಿ ತಂಡವನ್ನು ಗೆಲುವಿನ ದಡ ಹತ್ತಿಸಿದ್ದ ಹರ್ಭಜನ್ ತನ್ನ ಮೋಹಕ ಆಟದಿಂದ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳ ಮನಗೆದ್ದಿದ್ದರು. ಅಷ್ಟೇ ಏಕೆ ತಮ್ಮ ಆಟದಿಂದಲೇ ಪಂಜಾಬ್ ಪೊಲೀಸ್ ಇಲಾಖೆಯಲ್ಲಿ ಹುದ್ದೆ ಗಿಟ್ಟಿಸಿಕೊಂಡವರು. ಇವರು ಭಾರತ ತಂಡದಲ್ಲಿದ್ದಾಗ ಇವರನ್ನು ಭಜ್ಜಿ ಎಂದೇ ಎಲ್ಲರೂ ಪ್ರೀತಿಯಿಂದ ಕರೆಯುತ್ತಿದ್ದರು. ಇಂಥ ಭಜ್ಜಿ ಈ ನಡುವೆ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ ಎಂದು ಪಂಜಾಬಿನಲ್ಲಿ ಸುದ್ದಿ ಹರಿದಾಡುತ್ತಿತ್ತು. ಅದರಲ್ಲೂ ಭಜ್ಜಿ ಬಿಜೆಪಿ ಸೇರುತ್ತಾರೆ ಎಂಬ ಗಾಸಿಪ್ ಎಲ್ಲೆಡೆ ಜೋರಾಗಿಯೇ ಹಬ್ಬಿತ್ತು.
ಆದರೆ ಇದೀಗ ಭಜ್ಜಿ ಆ ಗಾಸಿಪನ್ನು ನಿರಾಕರಿಸಿದ್ದಾರೆ. ತಾವೆಂದೂ ಬಿಜೆಪಿ ಸೇರುತ್ತೇನೆ ಎಂದು ಹೇಳಿಲ್ಲ ಎಂದು ಸ್ಪಷ್ಟವಾಗಿ ಟ್ವಿಟ್ ಮಾಡಿರುವ ಭಜ್ಜಿ ಬಿಜೆಪಿ ಸೇರಿ ರಾಜಕೀಯಕ್ಕೆ ಬರುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ಆದರೆ ಇದೇ ವೇಳೆಗೆ ಅವರ ಟ್ವಿಟರ್ ಹ್ಯಾಂಡಲ್ನಿಂದಲೇ ಪಂಜಾಬಿನ ಕಾಂಗ್ರೆಸ್ ಮುಖಂಡ ನವಜೋತ್ ಸಿಂಗ್ ಸಿಕ್ಸರ್ ಸಿಧು ಹರ್ಭಜನ್ ಕಾಂಗ್ರೆಸ್ ಸೇರುವ ಸುಳಿವು ನೀಡಿದ್ದಾರೆ. ಅವರು ಮಾಡಿರುವ ಟ್ವಿಟ್ನಲ್ಲಿ ಹರಭಜನ್ ಸಿಂಗ್ ಜೊತೆಗಿರುವ ಫೋಟೊವೊಂದನ್ನು ಶೇರ್ ಮಾಡಿ ಅದಕ್ಕೆ ಶೀರ್ಷಿಕೆಯಾಗಿ ಈ ಚಿತ್ರವು ಎಲ್ಲ ಸಾಧ್ಯತೆಗಳನ್ನು ಮುಕ್ತವಾಗಿರಿಸುತ್ತದೆ. ಭಜ್ಜಿ ಎಂದೆಂದಿಗೂ ಒಬ್ಬ ಮಿನುಗುವ ನಕ್ಷತ್ರ ಎಂದು ಬರೆದಿದ್ದಾರೆ. ಇದು ಭಜ್ಜಿ ಕಾಂಗ್ರೆಸ್ ಸೇರುವ ಸಾಧ್ಯತೆ ದಟ್ಟವಾಗಿಸಿದೆ.
ಓಂಪ್ರಕಾಶ್ ನಾಯಕ್, ಪವರ್ ಟಿವಿ