ಬ್ರೆಜಿಲ್: ಬ್ರೆಜಿಲ್ನ ಫುಟ್ಬಾಲ್ ದಂಥಕಥೆ ಪೀಲೆ ಗೊತ್ತಲ್ಲವೆ? ನಮ್ಮಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಹೇಗೊ ಹಾಗೆ ಬ್ರೆಜಿಲ್ನಲ್ಲಿ ಫುಟ್ಬಾಲ್ ಆಟಗಾರನಾಗಿ ಪೀಲೆಯ ಹೆಸರು ಚಿರಸ್ಥಾಯಿಯಾಗಿದೆ ಅನ್ನಬಹುದು. ಇಂಥ ಅದ್ಭುತ ಫುಟ್ಬಾಲ್ ದಂತಕಥೆ ಪೀಲೆ ಕೊಲೊನ್ ಟ್ಯೂಮರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬ್ರೆಜಿಲ್ ಫುಟ್ಬಾಲ್ ತಂಡ ಮೂರು ಬಾರಿಯ ವಿಶ್ವಚಾಂಪಿಯನ್ ಆಗಲು ಮಹತ್ತರ ಕಾಣಿಕೆ ನೀಡಿದ್ದ 81 ವರ್ಷದ ಪೀಲೆ ಸೆಪ್ಟೆಂಬರ್ 4ರಂದು ಗೆಡ್ಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಪುನಃ ಕೊಲೊನ್ ಟ್ಯೂಮರ್ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅವರ ವೈದ್ಯರು ಬುಧುವಾರ ಹೇಳಿದ್ದಾರೆ.
ಈ ವರ್ಷದ ಸೆಪ್ಟೆಂಬರ್ನಲ್ಲಿ ಗುರುತಿಸಲಾದ ಕೊಲೊನ್ ಟ್ಯೂಮರ್ ನಂತರದ ಚಿಕಿತ್ಸೆಗಾಗಿ ಸಾವೊಪಾಲೊದಲ್ಲಿನ ಆಲ್ಬರ್ಟ್ ಐನ್ಸ್ಟೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ವೈದ್ಯಕೀಯ ತಂಡವು ಹೇಳಿಕೆಯಲ್ಲಿ ತಿಳಿಸಿದೆ. ರೋಗಿಯ ಸ್ಥಿತಿಯು ಸ್ಥಿರವಾಗಿದೆ ಹಾಗೂ ಮುಂಬರುವ ದಿನಗಳಲ್ಲಿ ಅವರು ಪುನಃ ಆರೋಗ್ಯವಾಗಿ ಮನೆಗೆ ಮರಳುವ ವಿಶ್ವಾಸವಿದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಫುಟ್ಬಾಲ್ನ ಸಾರ್ವಕಾಲಿಕ ಶ್ರೇಷ್ಟ ಆಟಗಾರ ಎಂದು ಗುರುತಿಸಲ್ಪಟ್ಟಿರುವ ಎಡ್ಸನ್ ಅರಾಂಟೆಜ್ ಡೊ ನಾಸ್ಸಿಮೆಂಟೊ- ಇದು ಪೀಲೆಯ ನಿಜವಾದ ಹೆಸರು. 1958, 1962 ಮತ್ತು 1970 ಹೀಗೆ ಮೂರು ವಿಶ್ವಕಪ್ಗಳನ್ನು ಗೆದ್ದ ತಂಡದಲ್ಲಿದ್ದ ಏಕೈಕ ಅದ್ಭುತ ಆಟಗಾರ ಪೀಲೆ. ಅವರು ಬ್ರೆಜಿಲ್ ಮೊದಲ ಬಾರಿಗೆ ವಿಶ್ವಕಪ್ ಗೆದ್ದಾಗ ಅತಿಥೆಯ ಸ್ವೀಡನ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಎರಡು ಗೋಲು ಹೊಡೆಯುವ ಮೂಲಕ ತಮ್ಮ ಹದಿನೆಳನೆ ವಯಸ್ಸಿನಲ್ಲೇ ಜಗತ್ಪ್ರಸಿದ್ಧರಾಗಿದ್ದರು.
ಓ ರೆ ಎಂದರೆ ಇಂಗ್ಲೀಷಿನಲ್ಲಿ ದಿ ಕಿಂಗ್ ಎಂದು ಅರ್ಥ. ಕನ್ನಡದಲ್ಲಿ ಹೇಳುವುದಾದರೆ ಚಕ್ರವರ್ತಿ. ಪೀಲೆಯನ್ನು ಅಲ್ಲಿನ ಜನ ಕರೆಯುವುದು ಓ ರೆ ಎಂದು. 1977ರಲ್ಲಿ ಪೀಲೆ ಫುಟ್ಬಾಲ್ನಿಂದ ನಿವೃತ್ತರಾಗುವ ಮೊದಲು 1000 ಗೋಲುಗಳನ್ನು ಗಳಿಸುವ ಮೂಲಕ ಯಾರೂ ಮಾಡಲು ಸಾಧ್ಯವಾಗದಂಥ ದಾಖಲೆಯನ್ನು ನಿರ್ಮಿಸಿ ನಿವೃತ್ತಿ ಹೊಂದಿದ್ದರು.ಇಂಥ ಅದ್ಭುತ ಆಟಗಾರ 81 ವರ್ಷದ ಪೀಲೆ ಇಂದು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾರೆ. ಓರೆ ಬೇಗ ಗುಣಹೊಂದಿ ಮನೆಗೆ ವಾಪಸಾಗಲಿ ಎಂದು ಹಾರೈಸೋಣ.
ಓಂಪ್ರಕಾಶ್ ನಾಯಕ್, ಪವರ್ ಟಿವಿ