ತುಮಕೂರು : ಬೆಳೆ ಹಾನಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಕೋರಿ ಕೇಂದ್ರ ಸರ್ಕಾರದ ಪ್ರಕೃತಿ ವಿಕೋಪ ಕಾರ್ಯದರ್ಶಿಗಳಿಗೆ ಆರ್ಥಿಕ ಇಲಾಖೆ ವತಿಯಿಂದ ಪತ್ರವನ್ನು ಬರೆಯಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಇಂದು ತುಮಕೂರಿನ ಸಿದ್ಧಗಂಗಾಮಠದ ಶ್ರೀ ಶಿವಕುಮಾರ ಸ್ವಾಮಿಗಳ ಗದ್ದುಗೆಗೆ ದ್ವಿತೀಯ ವರ್ಷದ ಲಕ್ಷ ಪುಷ್ಪ ಬಿಲ್ವಾರ್ಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು, ಹಣಕಾಸಿನ ಅವಶ್ಯಕತೆ ಇದ್ದಲ್ಲಿ ಕೂಡಲೇ ತಿಳಿಸುವಂತೆ ಕೇಂದ್ರ ಸರ್ಕಾರ ತಿಳಿಸಿರುವ ಹಿನ್ನೆಲೆಯಲ್ಲಿ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳಲು ತಕ್ಷಣವೇ ಒಂದು ತಂಡವನ್ನು ಕಳುಹಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ರಾಜ್ಯ ಸರ್ಕಾರದ ಸಮೀಕ್ಷೆಯೂ ನಡೆದಿದೆ ಎಂದರು, ಬೆಳೆ ಹಾನಿಗೆ 685 ಕೋಟಿ ರೂ.ಗಳು ಜಿಲ್ಲಾಡಳಿತಗಳಲ್ಲಿ ಈಗಾಗಲೇ ಲಭ್ಯವಿದೆ. ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಪರಿಹಾರ ಆಪ್ನಲ್ಲಿ ಮಾಹಿತಿ ಆಪ್ ಲೋಡ್ ಮಾಡಿದವರಿಗೆ ಪರಿಹಾರವನ್ನು ವಿತರಿಸಲಾಗುತ್ತಿದೆ ಎಂದು ಅವರು ನುಡಿದರು.
ಕೋವಿಡ್ ನಿಯಂತ್ರಣಕ್ಕೆ ಕಟ್ಟೆಚ್ಚರ : ಕೋವಿಡ್ 19 ಅಲ್ಲಲ್ಲಿ ಸಾಂಕ್ರಾಮಿಕ ಕ್ಲಸ್ಟರ್ನಲ್ಲಿ ಕಂಡುಬರುತ್ತಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಕಂಟೇನ್ಮೆಂಟ್ ವಲಯಗಳನ್ನು ಮಾಡಿ, ಸಂಪರ್ಕಿತರ ಪರೀಕ್ಷೆ, ಕ್ವಾರಂಟೈನ್ ಮಾಡಲಾಗಿದೆ. ಕೆಲವು ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಬರುವ ಪ್ರತಿಯೊಬ್ಬರನ್ನು ಪರೀಕ್ಷಿಸಲಾಗುತ್ತಿದ್ದು, ನೆಗೆಟಿವ್ ವರದಿ ಬಂದ ನಂತರವೇ ನಗರ ಪ್ರವೇಶಕ್ಕೆ ಅವಕಾಶ ನೀಡಲು ಸೂಚನೆ ನೀಡಲಾಗಿದೆ. ಕೇರಳದಿಂದ ರಾಜ್ಯಕ್ಕೆ ಪ್ರವೇಶಿಸುವವರ ಮೇಲೆಯೂ ದೊಡ್ಡ ಪ್ರಮಾಣದಲ್ಲಿ ನಿಗಾ ಇರಿಸಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ವಹಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಕೇರಳದ ವಿದ್ಯಾರ್ಥಿಗಳು, ನರ್ಸಿಂಗ್ ಸಿಬ್ಬಂದಿ ಇವರುಗಳ ಬಗ್ಗೆಯೂ ನಿಗಾ ವಹಿಸಲಾಗುತ್ತಿದೇ ಎಂದರು.
ಹೊಸ ತಳಿಯ ಬಗ್ಗೆ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ನಿರ್ದೇಶನಗಳಂತೆ ಕರ್ನಾಟಕದಲ್ಲಿ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದೆ. ಶಾಲಾ ಕಾಲೇಜುಗಳ ಮೇಲೆಯೂ ನಿಗಾ ವಹಿಸಿದ್ದು, ಎಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ ಅಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.