ವಿಜಯಪುರ : ನಗರದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ ಕ್ರಿಶ್ಚಿಯನ್ ಮತಾಂತರ ರಾಜ್ಯದ ಹಳ್ಳಿ ಹಳ್ಳಿಯಲ್ಲಿ ನಡೆಯುತ್ತಿದೆ. ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಕೂಡ ಅಧಿವೇಶನದಲ್ಲಿ ಹೇಳಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುವಂತೆ ಶ್ರೀ ರಾಮಸೇನೆ ಸಂಘಟನೆಯಿಂದ ಆಗ್ರಹ ಮಾಡುತ್ತೇವೆ. ಇದುವರೆಗೂ ಬಡವರು, ಅನಕ್ಷರಸ್ಥರು, ಮುಂತಾದವರು ಮತಾಂತರ ಆಗುತ್ತಿದ್ದರು. ಇದೀಗ ಎಲ್ಲ ಸಮುದಾಯ, ವರ್ಗದವರನ್ನು ಮತಾಂತರ ಮಾಡುತ್ತಿದ್ದಾರೆ. ದಾವಣಗೆರೆ, ಚಿತ್ರದುರ್ಗದ ಭಾಗದಲ್ಲಿ ಒಂದು ಲಕ್ಷಕ್ಕೂ ಅಧಿಕ ಲಿಂಗಾಯತರನ್ನು ಮತಾಂತರ ಮಾಡಲಾಗಿದೆ.
ಶಾಮನೂರು ಶಿವಶಂಕರ ಅವರು ಮತಾಂತರ ಆದವರನ್ನು ವಾಪಸ್ ತರುವಂತೆ ಸಮಾಜಕ್ಕೆ ಪತ್ರ ಬರೆದಿದ್ದಾರೆ, ನಾನು ಅದನ್ನು ಸ್ವಾಗತಿಸುತ್ತೇನೆ. ಮತಾಂತರ ಮಾಡುವುದು ದೇಶದ್ರೋಹದ ಕೆಲಸ. ಲ್ಯಾಂಡ್ ಎನ್ನುವಂತಹದ್ದನ್ನು ಕನ್ವರ್ಟ್ ಮಾಡಿ, ಕ್ರಿಶ್ಚಿಯನ್ ಲ್ಯಾಂಡ್ ಎಂದು ಮಾಡ್ತಿದ್ದಾರೆ. ವಿಜಯಪುರ ಜಿಲ್ಲೆ ಸೇರಿದಂತೆ ಹಲವೆಡೆ ತಾಂಡಾಗಳನ್ನು ಪೂರ್ತಿಯಾಗಿ ಮತಾಂತರ ಮಾಡುತ್ತಿದ್ದಾರೆ. ಅವರನ್ನು ವಾಪಸ್ ತರುವ ಕೆಲಸವನ್ನು ಸೇವಾಲಾಲ್ ಸ್ವಾಮೀಜಿಗಳು ಮಾಡುತ್ತಿದ್ದಾರೆ. ಬೀದರ, ಕಲಬುರಗಿ ಭಾಗದಲ್ಲಿ ಶೇಕಡಾ 60% ರಷ್ಟು ಮಾದಿಗ ಸಮಾಜದವರನ್ನು ಮತಾಂತರ ಮಾಡಿದ್ದಾರೆ. ಇದೇ ಕೆಲಸ ಮುಂದುವರೆಸಿದರೆ ಸಿಕ್ಕಸಿಕ್ಕಲ್ಲಿ ಒದೆಯಬೇಕಾಗುತ್ತದೆ ಎಂದು ಮುತಾಲಿಕ್ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡುತ್ತಾ ರಾತ್ರಿ ಹತ್ತು ಗಂಟೆಯಿಂದ ಬೆಳಗ್ಗೆ ಆರು ಗಂಟೆಯ ವರೆಗೆ ಯಾವುದೇ ಮೈಕ್ ಬಳಸುವಂತಿಲ್ಲ ಎಂದು ಸ್ರುಪ್ರೀಂ ಕೋರ್ಟ್ ಆರ್ಡರ್ ಮಾಡಿದೆ. ಆದ್ರೆ ಬೆಳಗ್ಗೆ ಐದು ಗಂಟೆಗೆ ನಮಾಜ್ ಶುರು ಆಗುತ್ತೆ, ಇದು ನ್ಯಾಯಾಲಯ ಆದೇಶ ಉಲ್ಲಂಘನೆ ಆಗಿದೆ. ಆದ್ರೆ ಪೊಲೀಸರು ಮತ್ತು ಕಾನೂನು ಬಾಯಿ ಮುಚ್ಚಿಕೊಂಡು ಕುಂತಿವೆ.
ಸುಪ್ರೀಂ ಕೋರ್ಟ್ ಆರ್ಡರ್ ಇದೆ ಎಂದು ನಂಜನಗೂಡ ದೇವಸ್ಥಾನ ಒಡೆಯುತ್ತಾರೆ. ಅದೇ ಸುಪ್ರೀಂ ಕೋರ್ಟ್ ಆರ್ಡರ್ ಇದ್ರೂ ಯಾಕೆ ಮಸೀದಿಯಲ್ಲಿನ ಮೈಕ್ ಬಂದ್ ಮಾಡುತ್ತಿಲ್ಲ, ಈ ರೀತಿ ಕಾನೂನು ಉಲ್ಲಂಘನೆ ಆಗಿದ್ದನ್ನು ತಡೆಯಬೇಕು ಎಂದು ಈಗಾಗಲೇ ರಾಜ್ಯದ ಎಲ್ಲ ತಹಶೀಲ್ದಾರ್ ಗಳಿಗೆ ಮನವಿ ಕೊಟ್ಟಿದ್ದೇವೆ. ಇನ್ನು ಮುಂದೆ ಎಲ್ಲ ಡಿಸಿ ಕಚೇರಿಗಳ ಎದುರು ಹೋರಾಟ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಗಲಾಟೆಗಳಾಗಿ ಅನಾಹುತಗಳು ಆಗುವ ಮೊದಲು ಡಿಸಿಗಳು ಈ ವಿಚಾರವನ್ನು ಹದ್ದು ಬಸ್ತಿನಲ್ಲಿ ಇಡಬೇಕು ಎಂದು ಪ್ರಮೋದ ಮುತಾಲಿಕ್ ಹೇಳಿದ್ದಾರೆ.