ನವದೆಹಲಿ : ನವದೆಹಲಿ ತ್ರಿಪುರಾದಲ್ಲಿ ತನ್ನ ಸದಸ್ಯರ ಮೇಲೆ ನಡೆದ ಹಿಂಸಾಚಾರ ಖಂಡಿಸಿ ಗೃಹ ಸಚಿವಾಲದ ಮುಂದೆ ತೃಣಮೂಲ ಕಾಂಗ್ರೆಸ್ ಇಂದು ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಟಿಎಂಸಿ ನಾಯಕರು ನಾವು ಜಯಿಸುತ್ತೇವೆ ಎಂದು ಹಾಡುತ್ತಾ ಬಿಜೆಪಿ ವಿರುದ್ಧ ಘೋಷಣೆಗಳನ್ನ ಕೂಗಿದ್ದಾರೆ. ತೃಣಮೂಲ ಯುವ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಬಂಗಾಳಿ ನಟಿ ಸಾಯೋನಿ ಘೋಷ್ರನ್ನ ನಿನ್ನೆ ಬಂಧಿಸಲಾಗಿದ್ದು ಕೊಲೆ ಯತ್ನದ ಸೆಕ್ಷನ್‌ಗಳ ಅನ್ವಯ ತ್ರಿಪುರಾ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣ ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ತ್ರಿಪುರಾದಲ್ಲಿ ನಡೆದ ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವಿನ ಜಟಾಪಟಿ ಬೆನ್ನಲ್ಲೇ ಇದೀಗ ತ್ರಿಪುರ ಬಿಜೆಪಿಯ ಈ ನಡೆ ರಾಜಕೀಯ ಪ್ರೇರಿತ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ವರದಿ ಸಲ್ಲಿಸಲು ಟಿಎಂಸಿ, ಗೃಹ ಸಚಿವ ಅಮಿತ್ ಶಾ ಅವರನ್ನ ಭೇಟಿಯಾಗಲು ಟಿಎಂಸಿ ನಿರ್ಧರಿಸಿತ್ತು ಅದಕ್ಕೆ ಗೃಹ ಸಚಿವ ಅಮಿತ್ ಶಾ ಟಿಎಂಸಿ ನಾಯಕರ ಭೇಟಿಯನ್ನು ನಿರಾಕರಿಸಿದ್ದಾರೆ. ಹೀಗಾಗಿ ಟಿಎಂಸಿ ನಾಯಕರು ಗೃಹ ಸಚಿವಾಲಯದ ಮುಂದೆ ಧರಣಿ ಕುಳಿತಿದ್ದು ಸ್ಥಳದಲ್ಲಿ ಸಿಐಎಸ್ಎಫ್ ಮತ್ತು ದೆಹಲಿ ಪೊಲೀಸರನ್ನು ನಿಯೋಜಿಸಲಾಗಿತ್ತು.
ಈ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದ ಸೌಗತ ರಾಯ್, ಕಳೆದ 4 ತಿಂಗಳಿನಿಂದ ಪ್ರಜಾಪ್ರಭುತ್ವದ ಮೇಲೆ ಈ ದಾಳಿ ನಡೆಯುತ್ತಿದೆ. ಗೂಂಡಾಗಳು ಮತ್ತು ಪೊಲೀಸರ ಸಹಾಯದಿಂದ ಟಿಎಂಸಿಯ ಕಾರ್ಯಕ್ರಮಗಳನ್ನು ಮುಚ್ಚಬೇಕೆಂದು ಬಿಜೆಪಿ ಬಯಸುತ್ತಿದೆ. ಆದರೆ ನಾವು ಹೋರಾಟವನ್ನು ಮುಂದುವರಿಸುತ್ತೇವೆ.
ತ್ರಿಪುರಾ ತಮ್ಮ ಹಿಡಿತದಿಂದ ಜಾರಿಕೊಳ್ಳುತ್ತಿದೆ ಅಂತ ಬಿಜೆಪಿ ಹೆದರುತ್ತಿದೆ ಅಂತ ತ್ರಿಪುರಾದಲ್ಲಿ ನಡೆದ ದೌರ್ಜನ್ಯದ ಆರೋಪದ ಕುರಿತು ಟಿಎಂಸಿ ಸಂಸದ ಸೌಗತ ರಾಯ್ ಪ್ರತಿಕ್ರಿಯಿಸಿದ್ದಾರೆ.
ಸಂತೋಷ್ ಹೊಸಹಳ್ಳಿ, ನವದೆಹಲಿ