ಬೆಂಗಳೂರು : ರಾಜ್ಯ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳನ್ನು ಧಿಡೀರ್ ವರ್ಗಾವಣೆಗೊಳಿಸಲು ಆದೇಶ ಹೊರಡಿಸಿದೆ.
ಡಿಸಿಪಿ ಕೆ. ರಾಮರಾಜನ್ ಅವರನ್ನು ಹುಬ್ಬಳ್ಳಿ-ಧಾರವಾಡ ಪೊಲೀಸ್ ವಿಭಾಗದಿಂದ ಬೆಂಗಳೂರು ನಗರದ ಕಮಾಂಡ್ ಸೆಂಟರ್ಗೆ, ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾರನ್ನು ಭದ್ರಾವತಿ ಉಪ ವಿಭಾಗದಿಂದ ಹುಬ್ಬಳ್ಳಿ ಧಾರವಾಡ ಪೊಲೀಸ್ ವಿಭಾಗದ ಡಿ.ಸಿ.ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಮತ್ತು ಸಾಹಿಲ್ ಬಾಗ್ಲಾರಿಗೆ ಸಿ.ಐ.ಡಿ ಉಪ ಪೊಲೀಸ್ ಆಯುಕ್ತರಾಗಿ ಹೆಚ್ಚಿನ ಜವಾಬ್ದಾರಿ ವಹಿಸಲಾಗಿದೆ. ಐ.ಪಿ.ಎಸ್ ಅಧಿಕಾರಿ ಜಿತೇಂದ್ರ ಕುಮಾರ್ ದಯಮ್ ಅವರನ್ನು ಭದ್ರಾವತಿ ಉಪ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಮತಾಂತರ ಆರೋಪದ ಕೇಸ್ ಹಿನ್ನೆಲೆ, ಡಿಸಿಪಿಯಾಗಿದ್ದ ಕೆ. ರಾಮರಾಜನ್ ವರ್ಗಾವಣೆಯಾದರಾ? ಎಂಬ ಅನುಮಾನ ಮೂಡಿ ಬಂದಿದೆ. ಮತಾಂತರಕ್ಕೆ ಕುಮ್ಮಕ್ಕು ನೀಡಿದ್ದಾರೆ, ಎಂದು ಹುಬ್ಬಳ್ಳಿ – ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಅವರು, ರಾಮರಾಜನ್ ವಿರುದ್ಧ ಆರೋಪ ಮಾಡಿದ್ದರು. ಖುದ್ದು ಡಿಸಿಪಿಯೇ ಕುಮ್ಮಕ್ಕು ನೀಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದ್ದರು. ಇದಾದ ಕೆಲವು ದಿನಗಳಲ್ಲಿಯೇ ಡಿಸಿಪಿಯಾಗಿದ್ದ ರಾಮರಾಜನ್ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.