Wednesday, October 30, 2024

ಯಡಿಯೂರಪ್ಪರ ನಾಯಕತ್ವಕ್ಕೆ  ಕಲ್ಲು ಹಾಕುವ ಕೆಲಸ ಮಾಡಬೇಡಿ :  ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು

ಶಿವಮೊಗ್ಗ :  ನಾಯಕತ್ವಕ್ಕೆ ಕಲ್ಲು ಹಾಕುವ ಕೆಲಸ ಯಾರು ಕೂಡ ಮಾಡಬಾರದು. ಈ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಮಾತನಾಡಬಾರದು. ಒಂದು ವೇಳೆ ಈ ಕೆಲಸವನ್ನು ಯಾರಾದರೂ ಮಾಡಿದರೆ, ಅವರೆ ಅವರ ಕಾಲ ಮೇಲೆ ಕಲ್ಲು ಎತ್ತಿಹಾಕಿಕೊಂಡಂತೆ ಅಂತಾ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. 

ಇಂದು ಶಿಕಾರಿಪುರದ ಕಾಳೇನಹಳ್ಳಿ ರೇವಣಸಿದ್ಧ ಸ್ವಾಮೀಜಿ ಮಠದಲ್ಲಿ, ಮಲೆನಾಡು ಮಠಾಧೀಶರ ಪರಿಷತ್ತಿನ ಸ್ವಾಮೀಜಿಗಳ ಸಭೆಯಲ್ಲಿ, ಸಿ.ಎಂ. ಪಾಲ್ಗೊಂಡಿದ್ದ ವೇಳೆ, ನಾಯಕತ್ವದ ಬಗ್ಗೆ ಸ್ವಾಮೀಜಿಗಳು ಮಾತನಾಡಿದ್ದಾರಲ್ಲದೇ, ಎಚ್ಚರಿಕೆ ಕೂಡ ನೀಡಿದ್ದಾರೆ. ಯಾರಾದರೂ ಈ ನಾಯಕತ್ವಕ್ಕೆ ಕಲ್ಲು ಹಾಕುವ ಕೆಲಸ ಮಾಡಿದರೆ, ಅವರೇ ಅನುಭವಿಸುತ್ತಾರೆ.  ಯಡಿಯೂರಪ್ಪನವರ ಶ್ರೇಯೋಭಿವೃದ್ಧಿಗೆ ಹಾರೈಸುವ ಕೆಲಸ ನಮ್ಮ ಮಠಧೀಶ್ವರು ಮಾಡುತ್ತಿದ್ದೇವೆ. ರಾಜ್ಯಕ್ಕೆ ಎಂತಹ ನಾಯಕತ್ವ ಬೇಕು ಎಂಬುದರ ಬಗ್ಗೆ ಜನರೇ ನಿರ್ಧರಿಸಬೇಕು. ಯಡಿಯೂರಪ್ಪರಿಗೆ ಏನೇ ಅಡೆತಡೆಗಳು ಬಂದರೂ, ಸರಿಪಡಿಸಬೇಕು. ಈ ನಾಯಕತ್ವಕ್ಕೆ ಅಡೆತಡೆಗಳು ತರುವಂತಹ ಕಾರ್ಯ ಯಾರು ಮಾಡಬಾರದು. ಯಾರಾದರೂ ಈ ಕೆಲಸ ಮಾಡಿದರೆ ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಂತೆ ಅಂತಾ ಎಚ್ಚರಿಕೆ ನೀಡಿದ್ದಾರೆ.

ಯಡಿಯೂರಪ್ಪ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಪ್ರವಾಹ ಎದುರಿಸಿದರು. ಅದು ಮುಗಿತು ಎಂಬುವಷ್ಟರಲ್ಲೇ ಕೋವಿಡ್ ಸಂಕಷ್ಟ ಬಂದೆರಗಿದೆ. ಬೇರೆ ಯಾರಾದರೂ ಆಗಿದ್ದರೆ, ಧೃತಿಗೆಡುತ್ತಿದ್ದರು. ಕೋವಿಡ್ ನಂತಹ ಸಂಕಷ್ಟದ ಸಮಯವನ್ನು ಯಡಿಯೂರಪ್ಪನವರು, ಸಮರ್ಥವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಎಲ್ಲವನ್ನೂ ಜನರು ಮತ್ತು ಸಂಬಂಧಪಟ್ಟವರು ಗಮನಿಸಬೇಕು. ಈ ಸಂದರ್ಭದಲ್ಲಿ ನಾಯಕತ್ವದ ಮಾತನ್ನು ಯಾರು ಕೂಡ ಹೇಳಬಾರದು. ಅದರಿಂದ ಈ ನಾಡಿಗೆ ದೊಡ್ಡ ಅನಾಹುತವಾಗುತ್ತೆ. ಇದು ಕೋವಿಡ್ ಗಿಂತಲೂ ದೊಡ್ಡ ಆಘಾತವನ್ನುಂಟಾಗಲಿದೆ. ನಾಯಕತ್ವದ ಸ್ಥಿತ್ಯಂತರಕ್ಕೆ ಯಾರೂ ಕೂಡ, ಅವಕಾಶ ಕೊಡಬಾರದು. ಯಡಿಯೂರಪ್ಪನವರೇ ನಾಯಕತ್ವದಲ್ಲಿದ್ದು, ನಾಡು, ನುಡಿಗೆ ಇವರ ಸೇವೆ ಅಗತ್ಯವಾಗಿದೆ. ಯಡಿಯೂರಪ್ಪನವರ ಆಸೆ-ಆಕಾಂಕ್ಷೆಗಳನ್ನು ಅವರ ಪುತ್ರ, ಸಂಸದ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳು ಸುಗಮವಾಗಿ ನಡೆಯುತ್ತಿದೆ. ಬಿ.ವೈ. ರಾಘವೇಂದ್ರ ಅವರಿಗೆ ಮರಿ ಯಡ್ಯೂರಪ್ಪ ಎಂದೇ ಹೇಳಬಹುದು. ಈ ಹಿನ್ನೆಲೆಯಲ್ಲಿ,  ಯಡಿಯೂರಪ್ಪನವರಿಂದಾಗುವ ಮತ್ತಷ್ಟು ಕೆಲಸಗಳು ಬಾಕಿ ಇದೆ. ಈ ಕೆಲಸಗಳನ್ನೇಲ್ಲಾ ಅವರು ಪೂರೈಸಬೇಕು ಎಂದು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದ್ದಾರೆ.

RELATED ARTICLES

Related Articles

TRENDING ARTICLES