ಮಂಡ್ಯ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಡಿಸ್ನಿಲ್ಯಾಂಡ್ ಮಾದರಿ KRS ಅಭಿವೃದ್ಧಿ ಯೋಜನೆಗೆ ಪ್ಲಾನ್ ಮಾಡಲಾಗಿತ್ತು. ಈ ಯೋಜನೆ ಕಾವೇರಿ ಕೊಳ್ಳದಲ್ಲಿ ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ವಿವಾದ ಹೆಚ್ಚಾಗುತ್ತಿದ್ದಂತೆ ಸರ್ಕಾರ ಯೋಜನೆಯನ್ನ ಕೈಬಿಟ್ಟಿತ್ತು. ಇದೀಗ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲೂ ಕೂಡ ಡಿಸ್ನಿಲ್ಯಾಂಡ್ ಮಾದರಿ ಯೋಜನೆ ಸದ್ದು ಮಾಡ್ತಿದೆ.
ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಪ್ರವಾಸೋದ್ಯಮ ಖಾತೆ ಸಚಿವ ಸಿ.ಪಿ.ಯೋಗೇಶ್ವರ್ ಪ್ರವಾಸೋದ್ಯಮ ಅಭಿವೃದ್ಧಿಗೆ ಪಣತೊಟ್ಟಿರುವ ಹಾಗೂ ಡಿಸ್ನಿಲ್ಯಾಂಡ್ ಮಾದರಿ ಯೋಜನೆಗೆ ಆಸಕ್ತಿ ತೋರಿದ್ದಾರೆ. ಮಂಡ್ಯದ ಕೆ.ಆರ್.ಎಸ್.ನ ಕಾವೇರಿ ಸಭಾಂಗಣದಲ್ಲಿ ಸಚಿವರು, ಅಧಿಕಾರಿಗಳ ಸಭೆ ಮಾಡಿದ್ರು. ಸಭೆಯಲ್ಲಿ ಕಂದಾಯ, ಪ್ರವಾಸೋದ್ಯಮ, ನೀರಾವರಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ರು. ಈ ವೇಳೆ ಡಿಸ್ನಿಲ್ಯಾಂಡ್ ಮಾದರಿ ಯೋಜನೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ್ರು. ಸಭೆ ಬಳಿಕ ಮಾತನಾಡಿದ ಸಚಿವ ಯೋಗೇಶ್ವರ್, ಡಿಸ್ನಿಲ್ಯಾಂಡ್ ಮಾದರಿ KRS ಅಭಿವೃದ್ಧಿ ಮೂಲಕ ಪ್ರವಾಸೋದ್ಯಮ ಪುನಶ್ಚೇತನಕ್ಕೆ ಮುಂದಾಗಿದ್ದೇವೆ. ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಶೀಘ್ರವೇ ಅವರ ನಿರ್ಧಾರ ಪ್ರಕಟಿಸಲಿದ್ದಾರೆ. ಸಿಎಂ ನಿರ್ಧಾರದ ಬಳಿಕ ಗ್ಲೋಬಲ್ ಟೆಂಡರ್ ಕರೆದು ಅಭಿವೃದ್ಧಿ ಮಾಡ್ತೇವೆ ಎಂದು ಹೇಳಿದರು.
ಸಚಿವರ ಆಸೆಗೆ ತಣ್ಣೀರೆರಚಿದ ಸ್ಥಳೀಯ ಶಾಸಕರ ಹೇಳಿಕೆ:
ಸಚಿವ ಯೋಗೇಶ್ವರ್ ನಿರ್ಧಾರಕ್ಕೆ ಆರಂಭದಲ್ಲೇ ಅಪಸ್ವರ ಕೇಳಿ ಬಂದಿದೆ. ಒಂದೆಡೆ, ಪರಿಸರವಾದಿಗಳು ಮತ್ತು ರೈತರು ಕಳೆದ ಬಾರಿಯಂತೆ ಈ ಬಾರಿಯೂ ತೀವ್ರ ವಿರೋಧಕ್ಕೆ ಮುಂದಾಗಿದ್ದಾರೆ. ಮತ್ತೊಂದೆಡೆ ಸ್ಥಳೀಯ ಶಾಸಕ ರವೀಂದ್ರ ಶ್ರೀಕಂಠಯ್ಯ ಕೂಡ ಸಚಿವರ ಕನಸ್ಸಿಗೆ ತಣ್ಣೀರೆರಚುವ ರೀತಿ ಮಾತನ್ನಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ
ಶಾಸಕ ರವೀಂದ್ರ ಶ್ರೀಕಂಠಯ್ಯ, ನನ್ನ ಕ್ಷೇತ್ರದ ಜನರಿಗೆ ಅನ್ಯಾಯ ಆಗಲು ನಾನು ಬಿಡಲ್ಲ. ಅನ್ಯಾಯ ಆಗುವಂತ ಕಾಮಗಾರಿ ಮಾಡೋದಕ್ಕೂ ನಾನು ಬಿಡಲ್ಲ, ಅಂತಹ ಕಾಮಗಾರಿ ಕೂಡ ನಡೆಯಲ್ಲ ಎಂದಿದ್ದಾರೆ.
ಏನೇ ಆಗ್ಲೀ, ವಿವಾಧಿತ ಡಿಸ್ನಿಲ್ಯಾಂಡ್ ಮಾದರಿ KRS ಅಭಿವೃದ್ಧಿ ಯೋಜನೆ ಮತ್ತೆ ಸುದ್ದಿಯಾಗ್ತಿದೆ. ಸದ್ಯ ಚೆಂಡು ಸಿಎಂ ಅಂಗಳದಲ್ಲಿದ್ದು, ವಿವಾಧಿತ ಯೋಜನೆಗೆ ಬಿಜೆಪಿ ಸರ್ಕಾರ ಅಸ್ತು ಎನ್ನುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.
ಡಿ.ಶಶಿಕುಮಾರ್,