ಹುಬ್ಬಳ್ಳಿ: ಜೆಡಿಎಸ್ ಪಕ್ಷದಲ್ಲಿನ ಉಸಿರು ಕಟ್ಟಿಸಿವ ವಾತಾವರಣದಿಂದ ಬೆಸತ್ತು ನಾನು ಹಾಗೂ ನನ್ನ ಬೆಂಬಲಿಗರು ಬಿಜೆಪಿ ಪಕ್ಷವನ್ನು ಸೇರ್ಪಡೆಯಾಗುತ್ತಿದ್ದೇವೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ರಾಜಣ್ಣ ಕೊರವಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕಾಗಿಯೇ ನಾವು ಮಾತ್ರವಲ್ಲದೇ ನಮ್ಮೆಲ್ಲ ಕಾರ್ಯಕರ್ತರು ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರೂ ಕೂಡ ಜೆಡಿಎಸ್ ಪಕ್ಷ ಯಾವುದೇ ಸ್ಥಾನ ಮಾನ ನೀಡದೇ ಇರುವುದು ನಿಜಕ್ಕೂ ಬೇಸರವನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷಕ್ಕೆ ರಾಜೀನಾಮೆ ನೀಡಿ ನಾಳೆ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇವೆ.
ಸುಮಾರು ಎರಡ ತಲೆಮಾರಿನಿಂದ ಜೆಡಿಎಸ್ ಗೆ ನಮ್ಮ ಕುಟುಂಬ ರಾಜಕೀಯ ಸೇವೆ ಸಲ್ಲಿಸುತ್ತಾ ಬಂದಿದೆ. ಅಲ್ಲದೇ ನಾನು ಸುಮಾರು 31 ವರ್ಷಗಳಿಂದ ಜೆಡಿಎಸ್ ಪಕ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಇಲ್ಲಿ ನನಗೆ ಹಾಗೂ ನಮ್ಮ ಬೆಂಬಲಿಗರಿಗೆ ಉಸಿರು ಕಟ್ಟಿಸುವ ವಾತಾವರಣವಿದೆ. ಈ ಹಿನ್ನೆಲೆಯಲ್ಲಿ ನಾವು ಜೆಡಿಎಸ್ ತೊರೆಯುತ್ತಿದ್ದೇವೆ ಎಂದರು.
ನಾಳೆ ಉಣಕಲ್ ಹತ್ತಿರದ ಚೇತನ್ ಬ್ಯುಸಿನೆಸ್ ಸ್ಕೂಲ್ ಮುಂಭಾಗದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ನನ್ನೊಂದಿಗೆ ಸುಮಾರು 28 ಜನರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ. ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್ ನೇತೃದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಸೊಲ್ಲಾಪೂರದ ಸಂಸದರಾದ ಡಾ.ಜಯಸಿದ್ದೇಶ್ವರ, ಪ್ರದೀಪ ಶೆಟ್ಟರ್, ಎಸ್.ವಿ.ಸಂಕನೂರ,ಮುಖ್ಯಮಂತ್ರಿ ಕಾನೂನು ಸಲಹೆಗಾರರಾದ ಮೋಹನ ಲಿಂಬಿಕಾಯಿ ಉಪಸ್ಥಿತಿಯಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಲಿದ್ದೇನೆ ಎಂದರು.