ಶಿವಮೊಗ್ಗ: ಜನವರಿ 17 ಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಶಿವಮೊಗ್ಗ ಭೇಟಿ ಹಿನ್ನೆಲೆಯಲ್ಲಿ ಇಂದು ಸಂಸದ ಬಿ.ವೈ. ರಾಘವೇಂದ್ರ ಅಧಿಕಾರಿಗಳೊಂದಿಗೆ ಸ್ಥಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಭದ್ರಾವತಿಯಲ್ಲಿ ಸ್ಥಾಪನೆಯಾಗಲಿರುವ ಕ್ಷಿಪ್ರ ಕಾರ್ಯಾಚರಣೆ ಪಡೆಯ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಕೇಂದ್ರ ಗೃಹಸಚಿವ ಅಮಿತ್ ಷಾ ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ, ಕಾರ್ಯಕ್ರಮದ ವೇದಿಕೆ ನಿರ್ಮಾಣ, ಹೆಲಿಪ್ಯಾಡ್ ಸಮಾರಂಭದ ಪೂರ್ವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾರಕ್ಷಣಾಧಿಕಾರಿ ಕೆ.ಎಂ. ಶಾಂತರಾಜು, ಅಧಿಕಾರಿಗಳು, ಮುಖಂಡರ ಜೊತೆಗೆ ಸ್ಥಳ ಪರಿಶೀಲನೆ ನಡೆಸಿದ ಬಿ.ವೈ.ಆರ್., ಕಾರ್ಯಕ್ರಮ ಯಶಸ್ವಿಯಾಗುವ ನಿಟ್ಟಿನಲ್ಲಿ ಯೋಜಿಸುವಂತೆ ಸೂಚಿಸಿದರು. ಅಲ್ಲದೇ, ಎಲ್ಲಿಯೂ ಲೋಪವಾಗದಂತೆ, ಕಟ್ಟೆಚ್ಚರ ವಹಿಸುವಂತೆ ನಿರ್ದೇಶಿಸಿದ್ದಾರೆ.
ಭದ್ರಾವತಿಯಲ್ಲಿ ಜ. 17 ರಂದು, ಕ್ಷಿಪ್ರ ಕಾರ್ಯಾಚರಣೆ ಪಡೆ ಆರಂಭಗೊಳ್ಳುತ್ತಿದ್ದು, ಇದಕ್ಕಾಗಿ ಭದ್ರಾವತಿಗೆ ಕೇಂದ್ರ ಗೃಹ ಸಚಿವ ಅಮೀತ್ ಷಾ ಆಗಮಿಸುತ್ತಿದ್ದಾರೆ. ಈಗಾಗಲೇ, ಕೇಂದ್ರ ಮೀಸಲು ಪಡೆಯ ಹಿರಿಯ ಅಧಿಕಾರಿಗಳೊಂದಿಗೆ ಒಂದು ಸುತ್ತಿನ ಚರ್ಚೆ ನಡೆಸಿರುವ ಸಂಸದ ರಾಘವೇಂದ್ರ, ಅಂದಿನ ಗುದ್ದಲಿ ಪೂಜೆ ನೆರವೇರಿಕೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ನಡೆಸಲು ನಿರ್ದೇಶಿಸಿದ್ದಾರೆ.
ಈಗಾಗಲೇ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರತಾಪ್ ರೆಡ್ಡಿ, ರಾಜ್ಯ ಗುಪ್ತ ವಾರ್ತೆ ದಯಾನಂದ್, ಪೂರ್ವ ವಲಯ ದಾವಣಗೆರೆ ಐಜಿಪಿ ಎಸ್. ರವಿ, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಎಸ್.ಪಿ. ಕೆ.ಎಂ. ಶಾಂತರಾಜು ಹಾಗೂ ಕೇಂದ್ರ ಮೀಸಲು ಪೋಲಿಸ್ ಪಡೆಯ ಐ.ಜಿ.ಪಿ.ಗಳಾದ ಸಂಜಯ್ ಲಾತ್ಕರ್, ರಾಧಾಮೋಹನ್ ಮೀನಾ, ಡಿ.ಐ.ಜಿ. ಬಿಜಯ್ ಘೋಷ್, ಆರ್.ಎ.ಎಫ್. ಕಮಾಂಡೆಂಟ್ ಎರಿಕ್ ಜೋಸ್ ಮತ್ತಿತರೆ ಅಧಿಕಾರಿಗಳೊಂದಿಗೆ ಸಭೆ ಕೂಡ ನಡೆಸಿದ್ದಾರೆ.