ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಕೇಸರಿ ಕಲಿಗಳ ಕಾರ್ಯಕಾರಿಣಿ ಮತ್ತು ವಿಶೇಷ ಸಭೆ ಮುಕ್ತಾವಾಗಿದೆ. ಕೃಷಿ ಕಾಯ್ದೆ ಅನ್ನದಾತನಿಗೆ ಸಹಕಾರಿ ಎನ್ನುವ ಮೂಲಕ ಮತ್ತೆ ನೂತನ ಕಾಯ್ದೆನ್ನ ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಹಲವು ಮಹತ್ವದ ವಿಷಯಗಳ ಬಗ್ಗೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ.
ಸಿ.ಎಂ. ತವರು ಕ್ಷೇತ್ರ ಶಿವಮೊಗ್ಗದಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ಮುಕ್ತಾಯಗೊಂಡಿದೆ. ಸುಮಾರು 35 ವರ್ಷಗಳ ಬಳಿಕ ಜಿಲ್ಲೆಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಬಿಜೆಪಿ ಧ್ವಜಾರೋಹಣ ಮಾಡುವುದರ ಮೂಲಕ ಸಿ.ಎಂ. ಯಡಿಯೂರಪ್ಪ ವಿಶೇಷ ಸಭೆಗೆ ಚಾಲನೆ ನೀಡಿದರು. ಬಿಜೆಪಿ ನಾಯಕರು ಗೋ ಪೂಜೆ ನೆರವೇರಿಸುವುದರ ಮೂಲಕ, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತಂದಿರುವುದನ್ನು ಸಮರ್ಥಿಸಿಕೊಂಡರು. ಈ ವೇಳೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮಾಡಿದ್ದಕ್ಕೆ ಸಿ.ಎಂ. ಯಡಿಯೂರಪ್ಪ ಅವರಿಗೆ ಸನ್ಮಾನಿಸಿ ಅಭಿನಂಧಿಸಲಾಯಿತು.
ಬಳಿಕ ಬಹು ನಿರೀಕ್ಷಿತ ರಾಜ್ಯ ಬಿಜೆಪಿ ವಿಶೇಷ ಸಭೆಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹಿಂಗಾರ ಬಿಡಿಸುವುದರ ಮೂಲಕ ಚಾಲನೆ ನೀಡಿದರು. ಈ ಸಭೆ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಬಂದು ಬಿಜೆಪಿ ಅಧಿಕಾರದ ಗದ್ದುಗೆ ಏರಬೇಕು. ಇದಕ್ಕೆ ತಾವೇಲ್ಲರೂ ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳ ಮೂಲಕ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಶ್ರಮಿಸಬೇಕು ಎಂದು ಸಚಿವ ಈಶ್ವರಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು.
ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ದಿಕ್ಕು ತಪ್ಪಿಸಿರುವ ವಿರೋಧ ಪಕ್ಷಗಳಿಗೆ ತಿರುಗೇಟು ನೀಡಲು ಈ ಸಮಾವೇಶ ಬಳಕೆ ಮಾಡಿಕೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು. ಅಷ್ಟೇ ಅಲ್ಲದೇ, ಎಪಿಎಂಸಿ ಮತ್ತು ಕೃಷಿ ಕಾಯ್ದೆ ಬಗ್ಗೆ ಜನರಿಗೆ ರೈತರಿಗೆ, ವಾಸ್ತವಾಂಶ ತಿಳಿಸಲು ನಿರ್ಧರಿಸಲಾಯಿತು. ಮುಂಬರುವ ಜಿಲ್ಲಾ ಪಂಚಾಯಿತಿ ಚುನಾವಣೆ ದೃಷ್ಠಿಯಿಂದ 5 ತಂಡಗಳ ರಚನೆ ಮಾಡಲಾಗಿದ್ದು, ಬಿಜೆಪಿ ಜನಸೇವಕ ಎಂಬ ಸಮಾವೇಶವನ್ನು ಜನವರಿ 11 ರಿಂದ 13 ರವರೆಗೆ ನಡೆಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಹೇಳಿದರು.
ಸಿಎಂ ಬಿಎಸ್ ಯಡಿಯೂರಪ್ಪ ತವರು ಜಿಲ್ಲೆಯಲ್ಲಿ ಕೇಸರಿ ರಂಗು ಜೋರಾಗಿತ್ತು, ಸಭೆಯಲ್ಲಿ ಮಹತ್ವದ ನಿಣರ್ಯ ತೆಗೆದುಕೊಳ್ಳಲಾಗಿದ್ದು, ಮುಂದಿನ ಚುನಾವಣೆಗೆ ಸಿದ್ದತೆ ಬಗ್ಗೆ ಸಭೆಯಲ್ಲಿ ಪ್ರಮುಖ ನಿರ್ಧಾರ ತೆಗೆದುಕೋಳ್ಳಲಾಗಿದೆ ಎಂದು ಹೇಳಲಾಗಿದೆ.
200 ಕ್ಕೂ ಹೆಚ್ಚು ಕಾರ್ಯಕರ್ತರ ಪಡೆ, 27 ವಿಭಾಗಗಳ ಮೂಲಕ ಈ ವಿಶೇಷ ಸಭೆಯಲ್ಲಿ ಭಾಗಿಯಾಗಿದ್ದರು.