ಬೆಂಗಳೂರು: ಇಂದು ಬಿಜೆಪಿ ಕೋರ್ ಕಮಿಟಿ ಸಭೆ ಹಿನ್ನೆಲೆ ರಾಜ್ಯಕ್ಕೆ ಉಸ್ತುವಾರಿ ಅರುಣ್ ಸಿಂಗ್ ಆಗಮಿಸುತ್ತಿದ್ದಾರೆ. ಬಹು ನಿರೀಕ್ಷಿತ ಸಂಪುಟ ವಿಸ್ತರಣೆ ವಿಚಾರದಲ್ಲಿ ಅರುಣ್ ಯಾವ ಸಂದೇಶ ತರುತ್ತಾರೆ ನೋಡೋಣ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದು, ಸಚಿವಾಂಕ್ಷಿಗಳಲ್ಲಿ ಆಸೆ ಚಿಗುರುವಂತೆ ಮಾಡಿದೆ. 2 ದಿನಗಳ ಶಿವಮೊಗ್ಗದ ಸರಣಿ ಸಭೆಯಿಂದ ಏನೇನು ಸಂದೇಶ ಹೊರಬೀಳುತ್ತೆ ಎಂಬುದೇ ಈಗ ಎಲ್ಲರ ಕೌತುಕದ ವಿಷಯವಾಗಿದೆ.
ಶಿವಮೊಗ್ಗದಲ್ಲಿ ನಾಳೆಯಿಂದ 2 ದಿನ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ, ಪದಾಧಿಕಾರಿಗಳ ಸಭೆ ನಡೆಯಲಿದೆ. ಈ ಹಿನ್ನಲೆ ಇಂದು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಲಿದ್ದಾರೆ. ಅರುಣ್ ಸಿಂಗ್ ಭೇಟಿ ಹಿನ್ನೆಲೆ ಮತ್ತೆ ಸಂಪುಟ ವಿಸ್ತರಣೆ ಇಲ್ಲವೇ, ಪುನಾರಚನೆಯ ಮಾತುಗಳು ಜೋರಾಗಿ ಕೇಳಿ ಬರ್ತಿವೆ. ಈ ಬಾರಿ ಶತಾಯಗತಾಯ ಸಂಪುಟ ಸೇರಲು ಶಾಸಕರು ತಮ್ಮದೇ ರಾಜಕೀಯ ಲೆಕ್ಕಾಚಾರ ಶುರು ಮಾಡಿದ್ದಾರೆ. ಆದರೆ ಈ ಬಾರಿ ದೆಹಲಿ ನಾಯಕರಿಂದ ಯಾವ ಸಂದೇಶ ಬರಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿಎಂ ಯಡಿಯೂರಪ್ಪ , ಅರುಣ್ ಸಿಂಗ್ ಏನು ಸುದ್ದಿ ತರುತ್ತಾರೆ ನೋಡೋಣ ಎಂದು ನಗುತ್ತಲೇ ಉತ್ತರಿಸಿದ್ದಾರೆ. ಆ ಮೂಲಕ ಸಂಪುಟ ಸರ್ಕಸ್ ಕುರಿತಂತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಇಂಗಿತವನ್ನ ಪರೋಕ್ಷವಾಗಿ ಬಿಚ್ಚಿಟ್ಟಿದ್ದಾರೆ.
ಇನ್ನೂ ಸಂಪುಟ ಆಕಾಂಕ್ಷಿಗಳಲ್ಲಿ ಕೆಲವರು ದೇವರ ಮೋರೆ ಹೋಗಿದ್ದಾರೆ. ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಶಾಸಕರಾದ ಆರ್. ಶಂಕರ್, ಮಹೇಶ್ ಕುಮಟಳ್ಳಿ ಅಸ್ಸಾಂನ ಗುಹಾಟಿಯ ಶಕ್ತಿಪೀಠ ಕಾಮಾಕ್ಯ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಮೈತ್ರಿ ಸರ್ಕಾರ ಪತನಕ್ಕೂ ಇದೇ ಟೀಂ ಶಕ್ತಿ ದೇವತೆಯ ಮೊರೆ ಹೋಗಿತ್ತು. ಇಂದು ಕೂಡ ಕಾಮಾಕ್ಯ ದೇವಿಗೆ ನಮಿಸುವ ಮೂಲಕ ಇಷ್ಟಾರ್ಥ ಸಿದ್ದಿಗೆ ವಿಶೇಷ ಪೂಜೆ ನಡೆಸಿದ್ದಾರೆ.
ಇತ್ತ ಸಿಎಂ ಕೂಡ ನಾಯಕತ್ವ ಬದಲಾವಣೆ ವಿಚಾರ ಪ್ರಸ್ತಾಪವಾಗದಂತೆ ಎಚ್ಚರ ವಹಿಸಿದ್ದು, ಕಳೆದ ವಾರವಷ್ಟೇ ಆಪ್ತ ಸಚಿವರ ಸಭೆ ಕರೆದು ಮಾತನಾಡಿದ್ದಾರೆ. ಅಷ್ಟೇ ಅಲ್ಲ. ಜಿಲ್ಲಾವಾರು ಶಾಸಕರ ಸಭೆಗೆ ಸಮಯ ಕೂಡ ನಿಗದಿ ಮಾಡಿದ್ದು, ಶಾಸಕರ ಭಿನ್ನಾಭಿಪ್ರಾಯಗಳ ಬಗ್ಗೆಯೂ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದಾರೆ. ಸದ್ಯ ಎರಡು ದಿನ ಶಿವಮೊಗ್ಗದಲ್ಲಿ ನಡೆಯಲಿರುವ ಕೇಸರಿ ಪಕ್ಷದ ಸರಣಿ ಸಭೆಗಳು ಪಕ್ಷದಲ್ಲಿನ ಗೊಂದಲ ಬಗೆಹರಿಸುತ್ತಾ ಕಾದು ನೋಡಬೇಕು.