ಮಂಗಳೂರು : ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲಾದ ಸಮಾಲೋಚನಾ ಕಾರ್ಯಕ್ರಮಕ್ಕೆ ಎಬಿವಿಪಿ ಸಂಘಟನೆಯೊಂದಕ್ಕೆ ಮಾತ್ರವೇ ಆಹ್ವಾನ ನೀಡಿ ಇತರ ವಿದ್ಯಾರ್ಥಿ ಸಂಘಟನೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ NSUI ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.
ಮಂಗಳೂರು ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಎದುರು NSUI ನ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ವಿರುದ್ಧ ಘೋಷಣೆ ಕೂಗಿದರು.
ಸಂಸತ್ತಿನಲ್ಲಿ ಚರ್ಚಿಸದೆ, ರಾಜ್ಯ ಸರ್ಕಾರದ ಜತೆ ಸಮಾಲೋಚನೆ ನಡೆಸದೆ, ದೇಶದಲ್ಲಿ ಹಲವಾರು ವಿದ್ಯಾರ್ಥಿ ಸಂಘಟನೆಗಳಿದ್ದರೂ ಅವುಗಳ ಜತೆ ಚರ್ಚಿಸದೆ ಕೇಂದ್ರ ಸರಕಾರವು ಏಕಾಏಕಿಯಾಗಿ ಹೊಸ ಶಿಕ್ಷಣ ನೀತಿ ಜಾರಿಗೆ ಮುಂದಾಗಿದೆ. ಇದು ಕೇಂದ್ರ ಸರ್ಕಾರದ ಶಿಕ್ಷಣ ಕೇಸರೀಕರಣದ ಹುನ್ನಾರ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇದೇ ಸಂದರ್ಭ ಪ್ರತಿಭಟನಾ ನಿರತ NSUI ಸದಸ್ಯರು ಸಭೆ ನಡೆಯುತ್ತಿದ್ದ ಸಭಾಂಗಣಕ್ಕೆ ನುಗ್ಗಲು ಪ್ರಯತ್ನಿಸಿದ್ದು, ಪೊಲೀಸರು ಸಭಾಂಗಣ ದ್ವಾರದಲ್ಲೇ ತಡೆ ಹಿಡಿದು ವಾಪಾಸ್ ಕಳುಹಿಸಿದರು.
ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು