ಶಿವಮೊಗ್ಗ : ಶಿವಮೊಗ್ಗದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಟೆಸ್ಟ್ ಮಾಡಲು ಅನುಕೂಲವಾಗುವಂತೆ, ಸರ್ಕಾರ ಸಬ್ಸಿಡಿ ದರದಲ್ಲಿ ರ್ಯಾಪಿಡ್ ಟೆಸ್ಟ್ ಕಿಟ್ ನೀಡಬೇಕೆಂದು ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಸದಸ್ಯರು ಮನವಿ ಸಲ್ಲಿಸಿದ್ದಾರೆ. ಪಾಲಿಕೆಯ ವಿಪಕ್ಷ ನಾಯಕ ಹೆಚ್. ಸಿ. ಯೋಗಿಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈಗಾಗಲೇ, ಕೋವಿಡ್ ಬೇಗನೇ ಹರಡುತ್ತಿದೆ. ಇದರ ಪರೀಕ್ಷೆಯ ವಿಧಾನ ವಿಳಂಬವಾಗುತ್ತಿದೆ ಮತ್ತು ಫಲಿತಾಂಶ ಬರುವುದು ಕೂಡ ಎರಡು ದಿನ ಬೇಕಾಗುತ್ತದೆ. ಕೇವಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಾಬ್ ಟೆಸ್ಟ್ ಮಾಡುತ್ತಿರುವುದರಿಂದ ಬಹಳ ವಿಳಂಬವಾಗುತ್ತಿದೆ. ದೂರದ ಊರುಗಳಿಂದ ಬರುವ ರೋಗಿಗಳಂತೂ ಆತಂಕಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ, ನಗರದ ಎಲ್ಲ ಖಾಸಗಿ ನರ್ಸಿಂಗ್ ಹೋಂಗಳಿಗೆ ಕೋವಿಡ್ ಪರೀಕ್ಷೆ ಮಾಡಿಸಲು ಅನುಮತಿ ನೀಡಬೇಕು ಮತ್ತು ಸರ್ಕಾರ ಖಾಸಗಿ ನರ್ಸಿಂಗ್ ಹೋಂ ಗಳಿಗೆ, ಪರೀಕ್ಷೆ ಕಿಟ್ ನ್ನು ಅತ್ಯಂತ ಕಡಿಮೆ ಬೆಲೆಗೆ ಕೊಟ್ಟರೆ, ಬಡವರು, ಬಿಪಿಎಲ್ ಕಾರ್ಡ್‍ದಾರರು, ಉಚಿತವಾಗಿ ಟೆಸ್ಟ್ ಮಾಡಿಸಿಕೊಳ್ಳಲು ಅನುಕೂಲವಾಗುತ್ತದೆ. ಸರ್ಕಾರ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಕೂಡಲೇ, ಜಿಲ್ಲಾಧಿಕಾರಿಗಳು, ಸರ್ಕಾರಕ್ಕೆ ಈ ಬಗ್ಗೆ ಮನವರಿಕೆ ಮಾಡಿ ಸಬ್ಸಿಡಿ ದರದಲ್ಲಿ ಟೆಸ್ಟ್ ಕಿಟ್ ವಿತರಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.