ಶಿವಮೊಗ್ಗ : ನಿಧಿಯಾಸೆಗಾಗಿ, ಇತಿಹಾಸ ಪ್ರಸಿದ್ಧವಾದ ಮಹಂತಿನ ಮಠವನ್ನು ದುಷ್ಕರ್ಮಿಗಳು ಹಾಳುಗೆವುತ್ತಿರುವ ಶಂಕೆ ಇದೀಗ ವ್ಯಕ್ತವಾಗಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪವಿರುವ, ಮಲ್ಲಂದೂರಿನಲ್ಲಿರುವ ಮಹಂತಿನ ಮಠದಲ್ಲಿ ಅನೇಕ ಹಾಸು ಕಲ್ಲುಗಳು ಸೇರಿದಂತೆ, ಕಲ್ಲಿನ ಆನೆಗಳ ಕೆಳಭಾಗವನ್ನು ಕೆತ್ತಿ ವಿರೂಪಗೊಳಿಸಲಾಗಿದೆ. ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಸಮಿತಿ ಸದಸ್ಯರು, ಈ ಮಹಂತಿನ ಮಠದ ಸುತ್ತಮುತ್ತ ಸ್ವಚ್ಛತಾ ಕಾರ್ಯ ಕೈಗೊಂಡಿರುವ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಕೆಳದಿ ಅರಸರಾದ ರಾಜಾ ವೆಂಕಟಪ್ಪ ನಾಯಕರ ಕಾಲದಲ್ಲಿ ನಿರ್ಮಾಣಗೊಂಡ ಚಂಪಕಸರಸು ಮಹಾಂತಿನ ಮಠದ ಸುತ್ತಮುತ್ತ ಕೊಪ್ಪರಿಗೆ ನಿಧಿ ಎಂದು ಅನುಮಾನಿಸಿ, ದುಷ್ಕರ್ಮಿಗಳು ಹಾಳು ಮಾಡಿದ್ದಾರೆ. ಮಠದ ಮುಂಭಾಗದ ಕಲ್ಲಿನ ಆನೆಗಳನ್ನು ಕೆಸವಿ ಹಾಕಲಾಗಿದ್ದು, ಒಳಭಾಗದಲ್ಲಿ, ದೊಡ್ಡ ದೊಡ್ಡ ಚಪ್ಪಡಿ ಹಾಸು ಕಲ್ಲುಗಳನ್ನು ಕಿತ್ತು ಹಾಕಿರುವ ಕುರುಹುಗಳು ಪತ್ತೆಯಾಗಿವೆ. ಚಂಪಕಸರಸು ಮಹಂತಿನ ಮಠಕ್ಕೆ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಎರಡು ಕಲ್ಲಿನ ಆನೆಗಳ ಮಧ್ಯದಲ್ಲಿಯೂ ಸಹ ದುಷ್ಕರ್ಮಿಗಳು ಕಿತ್ತು ಹಾಕಿದ್ದು, ಇದು ದುಷ್ಕರ್ಮಿಗಳು ನಿಧಿಯ ಆಸೆಗಾಗಿಯೇ ಈ ಕೃತ್ಯ ಎಸಗಿರುವುದು ಸಾಬೀತಾಗಿದೆ.
ಅಂದಹಾಗೆ, ಆನಂದಪುರ ಎಂಬ ಹೆಸರು ಬರಲು ಕಾರಣಳಾದವಳು ಚಂಪಕಾ ಸುಂದರ ಯುವತಿ. ಇವಳ ಮತ್ತು ಕೆಳದಿ ರಾಜಾ ವೆಂಕಟಪ್ಪ ನಾಯಕರ ಪ್ರೇಮ ಕಥೆ ಪ್ರಾರಂಭವಾಗುವುದು ಸು೦ದರಿ ಚಂಪಕಳು ರಾಜರಿಗಾಗಿ ಬಿಡಿಸುತ್ತಿದ್ದ ಸುಂದರ ರಂಗೋಲಿಯಿಂದಾಗಿ. ಈ ಸುಂದರಿಯನ್ನು ಅಪಾರವಾಗಿ ಪ್ರೇಮಿಸುತ್ತಿದ್ದ ರಾಜ ವೆಂಕಟಪ್ಪ ನಾಯಕರು, ಚಂಪಕಳಿಗಾಗಿಯೇ, ಯಡೇಹಳ್ಳಿ ಕೋಟೆ ಎಂಬ ಹೆಸರು ಬದಲಿಸಿ ಆನಂದಪುರ ಎಂಬ ಹೆಸರು ಇಟ್ಟಿದ್ದರು ಎಂಬುದು ಇತಿಹಾಸ ಹೇಳುತ್ತದೆ. ದೀಘ೯ ಕಾಲ ಕೆಳದಿ ರಾಜ್ಯಬಾರ ಮಾಡಿದ ಮತ್ತು ರಾಜ್ಯ ವಿಸ್ತಾರ ಮಾಡಿದ ವೆಂಕಟಪ್ಪ ನಾಯಕರು ಈಗಿನ ಸಾಗರ ಪಟ್ಟಣದ ನಿರ್ಮಾತರು ಕೂಡ ಹೌದು. ಜಾತಿ ಮತ್ತು ಆಹಾರ ಪದ್ಧತಿಯ ಕಾರಣದಿಂದ ತಿರಸ್ಕೃತಳಾಗುವ ಚಂಪಕಾ ಹಾಲಿನಲ್ಲಿ ವಜ್ರ ಸೇರಿಸಿ ಹಾಲಾಹಲ ಸೇವಿಸುವ ದುರ೦ತ ಪ್ರೇಮ ಕಥೆ ಎಂಬುದು ಇತಿಹಾಸ ಹೇಳುತ್ತದೆ.
ಈ ಹಿನ್ನೆಲೆಯಲ್ಲಿ, ಚಂಪಕಳ ಸ್ಮಾರಕವಾಗಿ ಆನಂದಪುರದಿಂದ ಶಿಕಾರಿಪುರ ಮಾಗ೯ದಲ್ಲಿ ಸಿಗುವ ಮಲಂದೂರಿನಲ್ಲಿ ನಿರ್ಮಿಸಿರುವ ಸುಂದರ ಚಂಪಕ ಸರಸ್ಸು ಮಹಂತಿನ ಮಠದಲ್ಲಿ ಏನಾದರೂ ಕೊಪ್ಪರಿಗೆ ಸಿಗಬಹುದೆಂದು ದುಷ್ಕರ್ಮಿಗಳು ಈ ಸುಂದರ ಮಠವನ್ನು ಹಾಳುಗೆಡವುತ್ತಿದ್ದಾರೆ. ಇನ್ನು ಮುಂದೆಯೂ ಕೂಡ ದುಷ್ಕರ್ಮಿಗಳು ನಿಧಿಯಾಸೆಗಾಗಿ ಇನ್ನೂ ಈ ಇತಿಹಾಸವಿರುವ ಸ್ಥಳವನ್ನು ಹಾಳುಗೆಡುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಪ್ರಾಚ್ಯವಸ್ತು ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮತ್ತು ಈ ಸ್ಥಳವನ್ನು ಉಳಿಸಿ, ಇತಿಹಾಸ ಅರಿಯಲು ಸಹಕಾರಿಯಾಗುವಂತೆ ಸಂರಕ್ಷಿಸಬೇಕೆಂದು, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಸಮಿತಿ ಸದಸ್ಯರು ಮತ್ತು ಸ್ಥಳಿಯರು ಮನವಿ ಮಾಡಿಕೊಂಡಿದ್ದಾರೆ.