ವಿಜಯಪುರ : ಕರ್ತವ್ಯ ನಿರತ ಬಿಎಸ್ಎಫ್ ಯೋಧ ಹುತಾತ್ಮನಾದ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ. ಸೇನೆಯ ಇಲೆಕ್ಟ್ರಿಕಲ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಹುತಾತ್ಮನಾಗಿದ್ದಾರೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಯೋಧ. ಶಿವಾನಂದ ಬಡಿಗೇರ (31) ಹುತಾತ್ಮನಾಗಿರುವ ಯೋಧನಾಗಿದ್ದು, 14 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಮೊದಲು ಬಾಂಗ್ಲಾ ದೇಶದ ಗಡಿಯಲ್ಲಿ ನಂತರ ಚೀನಾ ಗಡಿಯಲ್ಲಿ ಸೇವೆ ಸಲ್ಲಿಸಿ ಜಮ್ಮು ಕಾಶ್ಮೀರದ ಗಡಿಯಲ್ಲಿ ನಿಯೋಜನೆಯಾಗಿದ್ದರು. ಹುತಾತ್ಮ ಯೋಧ ಶಿವಾನಂದ ಕಳೆದ ಒಂದೂವರೆ ವರ್ಷದ ಹಿಂದೆ ಅಷ್ಟೇ ತಾಳಿಕೋಟಿ ತಾಲೂಕಿನ ತುಂಬಗಿ ಗ್ರಾಮದ ಪುಷ್ಪಾ ಎಂಬುವರ ಜೊತೆಗೆ ವಿವಾಹವಾಗಿದ್ದರು. ಈ ಮಧ್ಯೆ ಮಗನ ಸಾವಿನ ಸುದ್ದಿ ಕೇಳಿ ಆತನ ತಂದೆ ಮತ್ತು ತಾಯಿ ಪ್ರಜ್ಞಾಹೀನರಾಗಿದ್ದಾರೆ. ನಂತರ ಉಪಚರಿಸಿದ ಬಳಿಕ ಚೇತರಿಸಿಕೊಂಡಿದ್ದಾರೆ. ಯೋಧನ ಮತ್ತೋಬ್ಬ ಸಹೋದರ ಕೂಡ ಸೇನೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಬಸರಕೋಡ ಗ್ರಾಮದ ಮೂಲಗಳು ತಿಳಿಸಿವೆ. ಬೇಗನೇ ತಮ್ಮ ಸಹೋದರನ ಪಾರ್ಥೀವ ಶರೀರ ತರುವಂತೆ ಜಿಲ್ಲಾಡಳಿತಕ್ಕೆ ಯೋಧನ ಸಹೋದರ ಕಾಳಪ್ಪ ಬಡಿಗೇರ ಮನವಿ ಮಾಡಿದ್ದಾರೆ…