Friday, November 22, 2024

ಬ್ಯಾನರ್ ಹಾಕುವ ಮೂಲಕ ಸಮಸ್ಯೆ ತೋಡಿಕೊಂಡ ಶೃಂಗೇರಿಗರು..!

ಚಿಕ್ಕಮಗಳೂರು : ಸುಸರ್ಜಿತ ಆಸ್ಪತ್ರೆ ಇಲ್ಲದ ವಲಯ, ನಿಮ್ಮ ಹಾಗೂ ಊರಿನ ಜನರ ಆರೋಗ್ಯದ ಹಿತದೃಷ್ಠಿಯಿಂದ ವಾಹನಗಳನ್ನ ನಿಧಾನವಾಗಿ ಚಲಿಸಬೇಕೆಂದು ತಮ್ಮಲ್ಲಿ ವಿನಂತಿ ಎಂಬ ಬೋರ್ಡ್ ಜಿಲ್ಲೆಯ ಶೃಂಗೇರಿಯಲ್ಲಿ ಕಂಡು ಬಂದಿದೆ.

ಈ ವಿಭಿನ್ನ ಬ್ಯಾನರ್ ಕಂಡು ಸ್ಥಳಿಯರ ಜೊತೆ ಜಿಲ್ಲೆಗೆ ಬರೋ ಪ್ರವಾಸಿಗರು ಕೂಡ ಕುತೂಹಲಭರಿತರಾಗಿದ್ದಾರೆ. ಕಳೆದೊಂದು ವಾರದಿಂದ ಶೃಂಗೇರಿ ಜನ ಬ್ಯಾನರ್ ಅಂದ್ರೆ ಬೆಚ್ಚಿ ಬೀಳ್ತಿದ್ದಾರೆ. ಶಂಕರಾಚಾರ್ಯರ ಪುತ್ಥಳಿ ಮೇಲೆ ಈದ್‍ಮಿಲಾದ್ ಹಬ್ಬದಲ್ಲಿ ಶುಭ ಕೋರುವ ಬ್ಯಾನರ್ ಹಾಕಿದ್ದರಿಂದ ಶೃಂಗೇರಿಯಲ್ಲಿ ವಾದ-ವಿವಾದ ಪ್ರತಿಭಟನೆಗಳೇ ನಡೆದಿದ್ದವು. ನೋಡ-ನೋಡುತ್ತಿದ್ದಂತೆ ಶೃಂಗೇರಿ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಇದೀಗ, ಮತ್ತೆ ಬ್ಯಾನರ್ ಸುದ್ದಿ ಶಾರದಾಂಭೆ ಮಡಿಲಲ್ಲಿ ಸದ್ದು ಮಾಡುತ್ತಿದೆ. ಬದಲಾಗಿ ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧದ ಬ್ಯಾನರ್. ಶೃಂಗೇರಿ ಪ್ರಸಿದ್ಧ-ಪುಣ್ಯ ಹಾಗೂ ಪ್ರವಾಸಿ ತಾಣ. ನಿತ್ಯ ಸಾವಿರಾರು ಭಕ್ತರು ಇಲ್ಲಿಗೆ ಬಂದು ಹೋಗುತ್ತಾರೆ. ಆದರೆ, ಇಂತಹಾ ಪ್ರವಾಸಿ ತಾಣದಲ್ಲಿ ಬಡಜನರ ಗೋಳನ್ನ ಕೇಳುವವರಿಲ್ಲದಂತಾಗಿದೆ. ಸುಮಾರು 40-50 ಸಾವಿರಕ್ಕೂ ಅಧಿಕ ಜನಸಂಖ್ಯೆಯುಳ್ಳ ಶೃಂಗೇರಿಯಲ್ಲಿ ಒಂದು ಸುಸರ್ಜಿತ ಆಸ್ಪತ್ರೆ ಇಲ್ಲ. ಸಣ್ಣ-ಪುಟ್ಟ ಜ್ವರ-ಶೀಥದಂತಹಾ ಖಾಯಿಲೆ ಹೊರತುಪಡಿಸಿ ಇನ್ಯಾವುದೇ ಖಾಯಿಲೆ ಇದ್ದರೂ ವೈದ್ಯರ ಬಾಯಲ್ಲಿ ಬರೋದು ಮಾತು ಒಂದೇ ‘ಇಲ್ಲಿ ಆಗಲ್ಲ, ಮಣಿಪಾಲ್‍ಗೆ ಹೋಗಿ’ ಅನ್ನೋದು. ಇದರಿಂದ ಸ್ಥಳೀಯರು ಕೂಡ ಸಂಕಷ್ಟಕ್ಕೀಡಾಗಿದ್ದಾರೆ.

 ಈಗಿರುವ ಆಸ್ಪತ್ರೆಯಲ್ಲಿ ಯಾವುದೇ ಸುಸರ್ಜಿತ ವ್ಯವಸ್ಥೆಯಾಗಲಿ, ಸೌಲಭ್ಯವಾಗಲಿ ಇಲ್ಲ. ಎಲ್ಲಾ ವಿಭಾಗದಲ್ಲೂ ವೈದ್ಯರೂ ಇಲ್ಲ. ಮಣಿಪಾಲ್ ಅಥವಾ ಉಡುಪಿಗೆ ಶೃಂಗೇರಿಯಿಂದ ಸುಮಾರು 100 ಕಿ.ಮೀ. ಇದೆ. ಅದು ಕೂಡ ಘಾಟಿಯ ರಸ್ತೆ. ತುರ್ತು ಸಂದರ್ಭದಲ್ಲಿ ಅಲ್ಲಿಗೆ ಹೋಗಲು ಎರಡರಿಂದ ಮೂರು ಗಂಟೆ ಬೇಕು. ಅಷ್ಟು ದೂರ ಹೋಗುವಾಗ ಮಾರ್ಗ ಮಧ್ಯೆ ಏನು ಬೇಕಾದ್ರು ಸಂಭವಿಸಬಹುದು. ಈಗಾಗಲೇ ಮಾರ್ಗ ಮಧ್ಯೆ ಕೊನೆಯುಸಿರೆಳೆದಿರೋರು ಹಲವರಿದ್ದಾರೆ. ಮತ್ತಲವರು ಅಲ್ಲಿನ ಬಿಲ್ ನೋಡಿ ಜೀವ ಉಳಿದರು ಜೀವನವೇ ಹೋದಂತಾಗಿದೆ. ಸಾಲ ತೀರಿಸಲು ದುಡಿಯುತ್ತಲೇ ಇದ್ದಾರೆ. ಹಾಗಾಗಿ, ತಾಲ್ಲೂಕಿನ ಜನ ಅಲ್ಲಲ್ಲೇ ಈ ರೀತಿಯ ಬ್ಯಾನರ್ ಬರೆಸಿ ಹಾಕಿದ್ದಾರೆ. ಕೂಡಲೇ ತಾಲ್ಲೂಕಿಗೊಂಡು ಸುಸರ್ಜಿತ ಆಸ್ಪತ್ರೆ ನಿರ್ಮಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

-ಸಚಿನ್ ಶೆಟ್ಟಿ 

RELATED ARTICLES

Related Articles

TRENDING ARTICLES