ಬನ್ನೇರುಘಟ್ಟ : ಅರಣ್ಯ ಭೂಮಿಯನ್ನು ಕೆಲವು ಬಲಾಢ್ಯರು ಒತ್ತುವರಿ ಮಾಡಿಕೊಂಡು ಬಡಾವಣೆ ನಿರ್ಮಿಸಿದ್ದ ಜಾಗವನ್ನು ಇದೀಗ ಹೈಕೋರ್ಟ್ ಅರಣ್ಯ ಇಲಾಖೆಗೆ ಸೇರಬೇಕೆಂದು ತೀರ್ಪು ನೀಡಿದ್ದು ಒತ್ತುವರಿಯಾಗಿದ್ದ ಅರಣ್ಯ ಭೂಮಿಯನ್ನು ಅರಣ್ಯಾಧಿಕಾರಿಗಳು ಇಂದು ವಶಕ್ಕೆ ಪಡೆದರು. ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಾಡಂಚಿನ ಗ್ರಾಮ ಭೂತಾನಹಳ್ಳಿ ಸಮೀಪದಲ್ಲಿ ಅರಣ್ಯ ಪ್ರದೇಶದ ನೂರಾರು ಕೋಟಿ ರೂ ಮೌಲ್ಯದ 25 ಎಕರೆ ಜಾಗವನ್ನು ಜಯಂತಿ ನಾರಾಯಣ್ ಸೇರಿದಂತೆ ಮತ್ತಿತರರು ಒತ್ತುವರಿ ಮಾಡಿಕೊಂಡಿದ್ದರು. ಅದಲ್ಲದೇ ಇತ್ತೀಚೆಗೆ ಬಡಾವಣೆ ನಿರ್ಮಾಣ ಮಾಡಿ ಅತಿಥಿ ಲೇಔಟ್ ಎಂದು ಹೆಸರಿಟ್ಟು ಸೈಟ್ ಗಳನ್ನು ಜನರಿಗೆ ಮಾರಾಟ ಸಹ ಮಾಡಿದ್ದು ಲಕ್ಷಾಂತರ ರೂಪಾಯಿ ಹಣ ಕೊಟ್ಟು ಸೈಟ್ ಗಳನ್ನು ಖರೀದಿ ಮಾಡಿದ್ದರು. ಅರಣ್ಯ ಪ್ರದೇಶದ ಜಾಗ ಒತ್ತುವರಿಯಾಗಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿದಾರರ ಮೇಲೆ ಹೈಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೀಗ ಕೋರ್ಟ್‌ನಲ್ಲಿ ಜಾಗ ಅರಣ್ಯ ಸಂಪತ್ತಿಗೆ ಸೇರಿದ್ದು ಎಂದು ತೀರ್ಪು ನೀಡುತ್ತಿದ್ದಂತೆ ಇಂದು ಜೆಸಿಬಿಗಳ ಮೂಲಕ ಬೆಂಗಳೂರು ದಕ್ಷಿಣ ಎಸಿಎಫ್ ವೆಂಕಟೇಶ್ ಹಾಗೂ ಆನೇಕಲ್ ಅರಣ್ಯ ಇಲಾಖೆಯ ಅಧಿಕಾರಿ ಕೃಷ್ಣ ನೇತೃತ್ವದ ತಂಡ ಒತ್ತುವರಿಯಾಗಿದ್ದ ಅರಣ್ಯ ಭೂಮಿಯನ್ನು ವಶಕ್ಕೆ ಪಡೆದು ಸಸಿಗಳನ್ನು ನೆಡುವ ಕಾರ್ಯ ಮಾಡಿದ್ದಾರೆ.