ವಿಜಯಪುರ : ಕೋವಿಡ್ ಹಿನ್ನಲೆಯಲ್ಲಿ ಮುಂಬರುವ ಶ್ರೀ ಗಣೇಶ ಚತುರ್ಥಿ ಹಾಗೂ ಮೊಹರಂ ಹಬ್ಬಗಳನ್ನು ಜಾಗೃತಿಯಿಂದ ಹಾಗೂ ಸರ್ಕಾರದ ಮಾರ್ಗಸೂಚಿಗಳನ್ವಯ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಪಿ ಸುನೀಲಕುಮಾರ ಹೇಳಿದ್ದಾರೆ. ವಿಜಯಪುರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಶ್ರೀ ಗಣೇಶ ಹಬ್ಬ ಆಚರಣೆ ಮತ್ತು ಮೊಹರಂ ಹಬ್ಬದ ಆಚರಣೆ ಕುರಿತಂತೆ ನಡೆದ ಶಾಂತಿ ಸಮಿತಿ ಸಭೆಯಲ್ಲಿ ನೂರಾರು ಜನ ಸ್ಥಳಿಯರು ಪಾಲ್ಗೊಂಡಿದ್ದರು. ಇನ್ನೂ ಇದೇ ಆಗಸ್ಟ್ 22 ರಿಂದ ಆಚರಿಸಲಾಗುವ ಶ್ರೀ ಗಣೇಶ ಹಬ್ಬ ಮತ್ತು ಆಗಸ್ಟ್ 30 ರಂದು ಆಚರಿಸಲಾಗುವ ಮೊಹರಂ ಹಬ್ಬಗಳನ್ನು ಸರಳವಾಗಿ, ಶಾಂತಿ ಮತ್ತು ಸೌಹಾರ್ದಯುತವಾಗಿ ಹಾಗೂ ಕೋವಿಡ್ ಹಿನ್ನೆಲೆ ತಮ್ಮ ಕುಟುಂಬಗಳ ಹಿತದೃಷ್ಟಿಯಿಂದ ಅತ್ಯಂತ ಜಾಗೃತಿಯಿಂದ ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಆಚರಿಸಬೇಕು ಎಂದು ಮನವಿ ಮಾಡಿದರು. ಶ್ರೀ ಗಣೇಶ ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕ ಶ್ರೀ ಗಣೇಶ ಮಂಡಳಿಗಳು ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಕಡ್ಡಾಯವಾಗಿ ಅನುಮತಿ ಮತ್ತು ಎನ್‍ಒಸಿ ಪಡೆಯಬೇಕು ಎಂದು ತಿಳಿಸಿದರು. ಇನ್ನೂ ಶ್ರೀ ಗಣೇಶ ಮಂಡಳಿಗಳು ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸಬೇಕು. ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು. ಸಾಮಾಜಿಕ ಅಂತರ ಕಾಪಾಡಿಕೊಂಡು ಸೂಕ್ತ ಸ್ಯಾನಿಟೈಜರ್ ಮತ್ತು ಸ್ಯಾನಿಟೈಜೇಶನ್ ವ್ಯವಸ್ಥೆಯೊಂದಿಗೆ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಬೇಕು. ಮನೆಗಳಲ್ಲಿ ಪ್ರತಿಷ್ಠಾಪಿಸುವಂತಹ ಶ್ರೀ ಗಣೇಶ ಮೂರ್ತಿಗಳನ್ನು ಮನೆ ಆವರಣದಲ್ಲಿ ವಿಸರ್ಜಿಸಲು ಕ್ರಮ ಕೈಗೊಳ್ಳಬೇಕು. ಈ ಬಾರಿ ಗಣೇಶ ಹಬ್ಬ ಮತ್ತು ಮೊಹರಂ ಹಬ್ಬಗಳಿಗೆ ಮೆರವಣಿಗೆಗಳಿಗೆ ಅವಕಾಶವಿರುವುದಿಲ್ಲ. ಆದರೆ ನಿಗದಿತ ಮೂರ್ತಿ ಮತ್ತು ಮೊಹರಂ ಪಂಜಾ-ತಾಜಿಯಾ ಪ್ರತಿಷ್ಠಾಪನಾ ಸ್ಥಳಗಳಲ್ಲಿ 30 ಕ್ಕಿಂತ ಹೆಚ್ಚು ಜನ ಸೇರದಂತೆ ಎಚ್ಚರಿಕೆ ವಹಿಸಬೇಕು ಮತ್ತು ಪೊಲೀಸ್ ಇಲಾಖೆಗೆ ತಮ್ಮ ಸಹಕಾರವನ್ನು ತಪ್ಪದೇ ನೀಡುವಂತೆ ತಿಳಿಸಿದರು..