ಶಿವಮೊಗ್ಗ: ಪ್ರಮುಖ ಕೋರ್ಸ್‍ಗಳ ತರಗತಿಗಳನ್ನು ಕಡಿತಗೊಳಿಸಿದ್ದು, ಹಿಂದಿನಂತೆಯೇ ತರಗತಿ ಮುಂದುವರೆಸಬೇಕೆಂದು ಒತ್ತಾಯಿಸಿ ಇಂದು ಎನ್.ಎಸ್.ಯು.ಐ. ಸಂಘಟನೆ ಸದಸ್ಯರು ಮತ್ತು ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ಇಂದು ಸಹ್ಯಾದ್ರಿ ವಿಜ್ಞಾನ ಕಾಲೇಜು ಮುಂಭಾಗ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಮುಖಂಡರು, ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಈ ವರ್ಷ ಸಿಬಿಜೆಡ್, ಪಿಸಿಎಂ, ಬಿಸಿಎ ಹಾಗೂ ಇನ್ನಿತರ ಪ್ರಮುಖ ಕೋರ್ಸ್‍ಗಳ ವಿಭಾಗಗಳನ್ನು 3 ರಿಂದ 1 ಸೆಕ್ಷನ್‍ಗೆ ಇಳಿಕೆ ಮಾಡಲಾಗಿದೆ. ಇದನ್ನು ಕೂಡಲೇ ಹಿಂದಿನಂತೆ 3 ಸೆಕ್ಷನ್‍ಗೆ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಸಹ್ಯಾದ್ರಿ ವಿಜ್ಞಾನ ಕಾಲೇಜಿಗೆ ಶಿವಮೊಗ್ಗ ಜಿಲ್ಲೆಯಷ್ಟೇ, ಸುತ್ತಮುತ್ತಲ ಜಿಲ್ಲೆಯ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ. ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಸ್ವಾಯತ್ತ ಕಾಲೇಜಾದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಶಿಕ್ಷಣ ಶುಲ್ಕ ಕಡಿಮೆ ಇರುವುದರಿಂದ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಈ ಬಾರಿ ಕಟ್ಟಡ ಕೊರತೆ ನೆಪವೊಡ್ಡಿ ಪ್ರಮುಖ ವಿಭಾಗಗಳ ತರಗತಿಗಳನ್ನು 3 ರಿಂದ 1ಕ್ಕೆ ಇಳಿಕೆ ಮಾಡಿರುವುದರಿಂದ ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುತ್ತಿಲ್ಲ. ಇದರಿಂದ ಖಾಸಗಿ ಕಾಲೇಜುಗಳಿಗೆ ಪ್ರವೇಶ ಪಡೆಯಲು ದುಬಾರಿ ಶುಲ್ಕ ತೆರಬೇಕಾಗುತ್ತದೆ. ದುಬಾರಿ ಶುಲ್ಕ ಭರಿಸಲಾಗದ ಅನೇಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮೊಟಕುಗೊಳಿಸಬೇಕಾದ ಸ್ಥಿತಿ ಉಂಟಾಗಲಿದೆ ಎಂದು ದೂರಿದ್ದಾರೆ. ಈ ಬಗ್ಗೆ ಕುಲಪತಿಗಳು ಗಮನಹರಿಸಿ ಹಿಂದಿನಂತೆ, ಎಲ್ಲಾ ವಿಭಾಗಗಳಲ್ಲಿಯೂ 3 ಸೆಕ್ಷನ್ ತೆರೆಯುವಂತೆ ಮತ್ತು ಅಷ್ಟೇ ವಿದ್ಯಾರ್ಥಿಗಳಿಗೆ ಪ್ರವೇಶ ದೊರಕಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.