Monday, November 25, 2024

ಮಳೆ ಕಮ್ಮಿಯಾದ್ರೂ ಕಾಫಿನಾಡಲ್ಲಿ ಕುಸಿಯುತ್ತಿವೆ ಮನೆಗಳು..!

ಚಿಕ್ಕಮಗಳೂರು :  ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿದ್ದು, ಈಗ ಮಲೆನಾಡಲ್ಲಿ ಸಾಧಾರಣ ಮಳೆ ಬೀಳುತ್ತಿದ್ದರೂ, ಬಿರುಸಾದ ಗಾಳಿಗೆ ಮನೆಗಳು ಕುಸಿಯುತ್ತಿವೆ..!

ತಾಲ್ಲೂಕು ಕುಮಾರಗಿರಿಯಲ್ಲಿ ಭಾರೀ ಗಾಳಿ-ಮಳೆಗೆ ಮನೆ ಕುಸಿದು ಬಿದ್ದಿದೆ. ಮನೆಯ ಒಂದು ಬದಿಯ ಗೋಡೆ ಸಂಪೂರ್ಣ ಕಳಚಿ ಬಿದ್ದಿದ್ದು, ಬಡಕುಟುಂಬದ ನಿವಾಸಿಗಳು ಪರಿಹಾರಕ್ಕಾಗಿ ಸರ್ಕಾರದ ಹಾದಿ ಎದುರು ನೋಡ್ತಿದ್ದಾರೆ. ಆದರೆ, ಮನೆ ಬಿದ್ದು ಮೂರ್ನಾಲ್ಕು ದಿನಗಳೇ ಕಳೆದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ ಎಂದು ಮನೆ ಕಳೆದುಕೊಂಡವರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಫಾತಿಮಾ ಎಂಬುವರ ಮನೆ ಮುಂಭಾಗ ಬಿರುಕು ಬಿಟ್ಟಿದ್ದು, ಅವರ ಕುಟುಂಬ ಆತಂಕದಿಂದ ಬದುಕುತ್ತಿದೆ. ಮನೆಯ ಗೋಡೆ ಬಿರುಕು ಬಿಟ್ಟಿರುವುದನ್ನ ಗಮನಿಸಿದರೆ ಮುಂದಿನ ದಿನಗಳಲ್ಲಿ ಮತ್ತೆ ಭಾರೀ ಗಾಳಿ-ಮಳೆ ಸುರಿದರೆ ಬಹುಶಃ ಮನೆ ಸಂಪೂರ್ಣ ಬೀಳುವ ಹಂತದಲ್ಲಿದೆ. ಅಷ್ಟರ ಮಟ್ಟಿಗೆ ಗೋಡೆ ಬಾಯ್ಬಿಟ್ಟಿದೆ.

ನಿನ್ನೆ ಮೂಡಿಗೆರೆ ತಾಲ್ಲೂಕಿನ ಕಿರುಗುಂದ ಗ್ರಾಮದ ಸಮೀಪದ ಪರಿಶಿಷ್ಟ ಜಾತಿ ಕಾಲೋನಿಯ ಬೈರಮ್ಮ ಎಂಬುವರ ಮನೆ ಕೂಡ ಕುಸಿದು ಬಿದ್ದಿದೆ. ಮನೆಯ ಒಂದು ಬದಿಯ ಗೋಡೆ ಸಂಪೂರ್ಣ ಕಳಚಿ ನೆಲಕ್ಕುರುಳಿದೆ. ಕೂಲಿಕಾರ್ಮಿಕ ಕುಟುಂಬಗಳು ಇದ್ದೊಂದು ಸೂರು ಕಳೆದುಕೊಂಡು ಆತಂಕದಿಂದ ಸಂಬಂಧಿಕರ ಮನೆಯಲ್ಲಿ ಬದುಕುವಂತ ಸ್ಥಿತಿ ನಿರ್ಮಾಣವಾಗಿದೆ. ಮಲೆನಾಡಲ್ಲಿ ಕಳೆದ ನಾಲ್ಕೈದು ದಿನಗಳಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಮಲೆನಾಡಲ್ಲಿ ಮಳೆಗಾಲದಲ್ಲಿ ಸುರಿಯುತ ಸಾಧಾರಣ ಮಳೆ ಅಲ್ಲಲ್ಲೇ ಸುರಿಯುತ್ತಿದೆ. ಆದರೆ, ಈ ಸಾಧಾರಣ ಮಳೆಗೆ ಮನೆಗಳು ಕುಸಿಯುತ್ತಿದ್ದ ಮಲೆನಾಡಿಗರು ಆತಂಕದಿಂದ ಬದುಕುತ್ತಿದ್ದಾರೆ. ಈ ಮಧ್ಯೆ ಮನೆ ಕಳೆದುಕೊಂಡವರು ಕೂಡಲೇ ಸರ್ಕಾರ ನಮಗೆ ಪರಿಹಾರ ಅಥವಾ ಪ್ರತ್ಯೇಕ ಸೂರಿನ ವ್ಯವಸ್ಥೆ ಕಲ್ಪಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

-ಸಚಿನ್ ಶೆಣೈ

RELATED ARTICLES

Related Articles

TRENDING ARTICLES