ಮಿಸ್ಟರ್ ಕೂಲ್ ಮಹೇಂದ್ರ ಸಿಂಗ್ ಧೋನಿ ಇನ್ಮುಂದೆ ಟೀಮ್ ಇಂಡಿಯಾ ಪರ ಮೈದಾನಕ್ಕೆ ಇಳಿಯಲ್ಲ, ಅವರ ಹೆಲಿಕಾಪ್ಟರ್ ಶಾಟ್ ಕಣ್ತುಂಬಿಕೊಳ್ಳೋಕೆ ಆಗಲ್ಲ, ಸಿಕ್ಸರ್ ಸಿಡಿಸಿ ಮ್ಯಾಚ್ ಗೆಲ್ಲಿಸುವುದನ್ನು ನೋಡೋ ಅವಕಾಶವೂ ಇಲ್ಲ ಅನ್ನೋ ಕಟು ಸತ್ಯವನ್ನು ಅರಗಿಸಿಕೊಳ್ಳಲು ಕಷ್ಟವಾದ್ರೂ ಭಾರವಾದ ಮನಸ್ಸಿಂದ ಒಪ್ಪಿಕೊಳ್ಳಲೇ ಬೇಕಿದೆ ಅಭಿಮಾನಿಗಳು!
ವಿಶ್ವ ಕ್ರಿಕೆಟ್ ಕಂಡ ಅದ್ಭುತ ಬ್ಯಾಟ್ಸ್ಮನ್, ವಿಕೆಟ್ ಕೀಪರ್, ನಾಯಕ ಧೋನಿ ನಿನ್ನೆ ರಾತ್ರಿ 7.29 ನಿಮಿಷಕ್ಕೆ ಇನ್ಸ್ಟಾಗ್ರಾಮ್ ಮೂಲಕ ನಿವೃತ್ತಿ ಘೋಷಿಸಿದ್ದಾರೆ. 16 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಧೋನಿ ಅನೇಕ ದಾಖಲೆಗಳನ್ನು ಮಾಡಿದ್ದಾರೆ. ಆ ರೆಕಾರ್ಡ್ಗಳಲ್ಲಿ ಬಹುಪಾಲು ರೆಕಾರ್ಡ್ಗಳನ್ನು ಭವಿಷ್ಯದಲ್ಲಿ ಬೇರೊಬ್ಬ ಆಟಗಾರ ಬ್ರೇಕ್ ಮಾಡೋದು ಕಷ್ಟ ಸಾಧ್ಯ..! ಅಂಥಾ ಕೆಲ ರೆಕಾರ್ಡ್ಗಳು ಇಲ್ಲಿವೆ.
ಅತಿ ಹೆಚ್ಚು ಟಿ20 ಗೆಲುವು ಪಡೆದಿರುವ ಕ್ಯಾಪ್ಟನ್ : 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಟಿ20 ವಿಶ್ವಕಪ್ ಗೆದ್ದ ನಾಯಕ ಧೋನಿ, ಅತಿ ಹೆಚ್ಚು ಟಿ20 ಪಂದ್ಯಗಳನ್ನು ಗೆದ್ದ ಕ್ಯಾಪ್ಟನ್ ಅನ್ನೋ ಕೀರ್ತಿಗೆ ಪಾತ್ರರಾಗಿದ್ದಾರೆ. 25 ನೇ ವಯಸ್ಸಲ್ಲಿ ಟೀಮ್ ಇಂಡಿಯಾ ಸಾರಥ್ಯ ವಹಿಸಿದ್ದ ಮಾಹಿ 2007 ರಿಂದ 2017ರವರೆಗೆ 72 ಟಿ20 ಮ್ಯಾಚ್ಗಳಲ್ಲಿ ತಂಡವನ್ನು ಮುನ್ನಡೆಸಿದ್ದು, ಇದರಲ್ಲಿ 41 ಮ್ಯಾಚ್ಗಳಲ್ಲಿ ಗೆಲುವು ಪಡೆದಿದ್ದಾರೆ.
IPLನಲ್ಲೂ ಯಶಸ್ವಿ ಕ್ಯಾಪ್ಟನ್ : ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ನ ಯಶಸ್ವಿ ನಾಯಕ ಕೂಡ ಹೌದು. ಹಿಟ್ಮ್ಯಾನ್ ರೋಹಿತ್ ಶರ್ಮಾ ನಾಯಕನಾಗಿ ಮುಂಬೈ ಇಂಡಿಯನ್ಸ್ ತಂಡವನ್ನು 4 ಬಾರಿ ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದಾರೆ ನಿಜ, ಆದರೆ, ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಅನ್ನು ಹೆಚ್ಚು ಬಾರಿ ( 9 ಬಾರಿ) ಫೈನಲ್ಗೆ ಕರೆದೊಯ್ದ ಕ್ಯಾಪ್ಟನ್! ಅಲ್ಲದೆ 2008 ರಿಂದ 2019ರವರೆಗೆ ಧೋನಿ 104 ಮ್ಯಾಚ್ಗಳನ್ನು ಗೆಲ್ಲಿಸಿಕೊಟ್ಟಿದ್ದು, IPLನಲ್ಲಿ 100 ಗೆಲುವು ಪಡೆದ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಐಸಿಸಿಯ ಎಲ್ಲಾ ಟ್ರೋಫಿಗಳನ್ನು ಗೆದ್ದವರು : ಧೋನಿ ನಾಯಕತ್ವದಲ್ಲಿ ಭಾರತ 2007ರ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರಲ್ಲಿ ಚಾಂಪಪಿಯನ್ ಟ್ರೋಫಿಯನ್ನು ಗೆದ್ದಿದೆ. ಹೀಗೆ ಎಲ್ಲಾ ಐಸಿಸಿ ಟ್ರೋಫಿ ಗೆದ್ದ ಕ್ಯಾಪ್ಟನ್ ಅನ್ನೋ ಶ್ರೇಯ ಮಿಸ್ಟರ್ ಕೂಲ್ ಅವರದ್ದು.
ಕಮ್ಮಿ ಇನ್ನಿಂಗ್ಸ್ನಲ್ಲಿ ನಂ 1 ಪಟ್ಟ : ಒಡಿಐನಲ್ಲಿ ಅತಿ ಕಡಿಮೆ ಇನ್ನಿಂಗ್ಸ್ನಲ್ಲಿ ನಂಬರ್ 1 ಬ್ಯಾಟ್ಸ್ಮನ್ ಆದ ದಾಖಲೆ ಕೂಡ ಧೋನಿ ಹೆಸರಲ್ಲಿದೆ. ಧೋನಿ ಒಡಿಐಗೆ ಪದಾರ್ಪಣೆ ಮಾಡಿ 48 ಇನ್ನಿಂಗ್ಸ್ಗಳಲ್ಲೇ ಮೊದಲ ಸ್ಥಾನ ಪಡೆದಿದ್ದರು. ಆ ದಾಖಲೆಯನ್ನು ಇನ್ನೂ ಕೂಡ ಯಾರೂ ಬ್ರೇಕ್ ಮಾಡಲು ಆಗಿಲ್ಲ.
ಅರ್ಧಶತಕ : 5 ಬೇರೆ ಬೇರೆ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಅರ್ಧಶತಕ ಸಿಡಿಸಿರುವ ಏಕೈಕ ಆಟಗಾರ ಧೋನಿ.
ಸಿಕ್ಸರ್ : ಧೋನಿ 20 ಬಾರಿ ಸಿಕ್ಸರ್ ಬಾರಿಸಿ ಮ್ಯಾಚ್ ಗೆಲ್ಲಿಸಿಕೊಟ್ಟ ಕೀರ್ತಿಗೂ ಪಾತ್ರರಾಗಿದ್ದಾರೆ.
ಶತಕ : 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ಅತಿ ಹೆಚ್ಚು ( 2 ಶತಕ) ಸೆಂಚುರಿ ಸಿಡಿಸಿದ ಬ್ಯಾಟ್ಸ್ಮನ್ ಕೂಡ ಹೌದು.
ಅತಿ ಹೆಚ್ಚು ರನ್ : ಏಕದಿನ ಕ್ರಿಕೆಟ್ನಲ್ಲಿ 5 ಮತ್ತು ಅದಕ್ಕಿಂತಲೂ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಅತಿ ಹೆಚ್ಚು ರನ್ (8324), 6 ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ (4031) ರನ್ ಬಾರಿಸಿದ ದಾಖಲೆ ಮಾಡಿದ್ದಾರೆ.
ಹೆಚ್ಚು ಬಾರಿ ನಾಟ್ ಔಟ್ : ಧೋನಿ 84 ಒಡಿಐ ಮ್ಯಾಚ್ಗಳಲ್ಲಿ ಅಜೇಯರಾಗಿ ಉಳಿದಿದ್ದರು. ಚೇಸಿಂಗ್ ಸಂದರ್ಭದಲ್ಲಿ 51 ಬಾರಿ ಧೋನಿ ನಾಟ್ಔಟ್ ಆಗಿದ್ದು, ಅದರಲ್ಲಿ 47 ಪಂದ್ಯಗಳಲ್ಲಿ ಭಾರತ ಗೆದ್ದಿದೆ ಅನ್ನೋದು ವಿಶೇಷ. 2 ಮ್ಯಾಚ್ಗಳು ಡ್ರಾ ಆಗಿದ್ದು, 2 ಮ್ಯಾಚ್ಗಳಲ್ಲಿ ಭಾರತ ಸೋತಿದೆ. ಒಟ್ಟಾರೆ 84 ಏಕದಿನ ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದು ವರ್ಲ್ಡ್ ರೆಕಾರ್ಡ್. ಸೌತ್ ಆಫ್ರಿಕಾದ ಮಾಜಿ ಆಲ್ರೌಂಡರ್ ಶಾನ್ ಪೊಲಾಕ್ 72 ಬಾರಿ ನಾಟ್ಔಟ್ ಆಗಿದ್ದರು.
ಹೆಚ್ಚು ಸ್ಟಂಪಿಂಗ್ : ಟೆಸ್ಟ್, ಏಕದಿನ, ಟಿ20 ಮೂರೂ ಮಾದರಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತೀ ಹೆಚ್ಚು ಸ್ಟಂಪಿಂಗ್ ಮಾಡಿದ ದಾಖಲೆಯನ್ನು ಧೋನಿ ಹೊಂದಿದ್ದಾರೆ. ಏಕದಿನ ಪಂದ್ಯಗಳಲ್ಲಿ 120, ಟೆಸ್ಟ್ನಲ್ಲಿ 38 ಹಾಗೂ ಟಿ20ಯಲ್ಲಿ 34 ಸ್ಟಂಪಿಂಗ್ ಸೇರಿದಂತೆ ಒಟ್ಟು 195 ಸ್ಟಂಪಿಂಗ್ ಮಾಡಿದ್ದು, ಸೌತ್ ಆಫ್ರಿಕಾದ ಮಾರ್ಕ್ ಬೌಷರ್ ಹಾಗೂ ಆಸ್ಟ್ರೇಲಿಯಾದ ಆ್ಯಡಮ್ ಗಿಲ್ಕ್ರಿಸ್ಟ್ ನಂತರದ ಸ್ಥಾನದಲ್ಲಿದ್ದಾರೆ.
ಒಡಿಐನಲ್ಲಿ 50+ ಸರಾಸರಿ : ಧೋನಿ ಟೀಮ್ ಇಂಡಿಯಾ ಪರ 350 ಏಕದಿನ ಮ್ಯಾಚ್ಗಳನ್ನು ಆಡಿದ್ದಾರೆ. 50 ರನ್ ಸರಾಸರಿಯಲ್ಲಿ 10 ಸಾವಿರ ರನ್ ಬಾರಿಸಿದ್ದಾರೆ. 273 ಇನ್ನಿಂಗ್ಸ್ಗಳಲ್ಲಿ ಈ ರನ್ ಮಳೆ ಹರಿಸಿರುವ ಧೋನಿ, ವೇಗವಾಗಿ ಈ ಸಾಧನೆ ಮಾಡಿದವರ ಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದ್ದಾರೆ.