ದಕ್ಷಿಣ ಕನ್ನಡ: ಪರಕೀಯರ ವಿರುದ್ಧ 16 ನೇ ಶತಮಾನದಲ್ಲೇ ಕೆಚ್ಚೆದೆಯಿಂದ ಹೋರಾಡಿ ವೀರ ವನಿತೆಯಾಗಿ ಗುರುತಿಸಲ್ಪಟ್ಟ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ನೆನಪು ಇಂದಿನ ಜನಮಾನಸದಲ್ಲಿ ಅಷ್ಟಕ್ಕಷ್ಟೇ. ಅಂತಹ ವೀರ ವನಿತೆಯನ್ನ ಯುವ ಕಲಾವಿದನೋರ್ವ ತನ್ನ ಕೈಚಳಕದ ಮೂಲಕ ಮತ್ತೆ ನೆನಪಿಸುವಂತೆ ಮಾಡಿದ್ದಾನೆ.
ಪೋರ್ಚುಗೀಸರ ವಿರುದ್ಧ ಸೈನ್ಯ ಕಟ್ಟಿಕೊಂಡು ಹೋರಾಡಿದ್ದ ರಾಣಿ ಅಬ್ಬಕ್ಕಳಿಗೆ ಯುವ ಕಲಾವಿದ ಸಾತ್ವಿಕ್ ಆಚಾರ್ಯ ತನ್ನ ಚಿತ್ರದ ಮೂಲಕ ಹೊಸ ಸ್ಪರ್ಶ ನೀಡಿದ್ದಾರೆ. ಅಂದಹಾಗೆ ಉಳ್ಳಾಲ ಪ್ರದೇಶವನ್ನ ತನ್ನ ರಾಜಧಾನಿಯಾಗಿಸಿಕೊಂಡು ಆಳ್ವಿಕೆ ನಡೆಸಿದ್ದ ಚೌಟ ವಂಶದ ರಾಣಿ ಅಬ್ಬಕ್ಕಳ ಊರಾದ ಮೂಡಬಿದ್ರಿಯ ಯುವ ಕಲಾವಿದ ಸಾತ್ವಿಕ್ ನೆಲ್ಲಿತೀರ್ಥ ಇವರೇ ರಾಣಿ ಅಬ್ಬಕ್ಕಳ ಚಿತ್ರಕ್ಕೆ ಜೀವಕಳೆ ತುಂಬಿದವರು. ಮೂಡಬಿದ್ರಿಯ ಆಳ್ವಾಸ್ ಕಾಲೇಜಿನ ಅಂತಿಮ ವರುಷದ ವಿಶ್ಯುವಲ್ಸ್ ಆರ್ಟ್ ವಿದ್ಯಾರ್ಥಿಯಾಗಿರುವ ಸಾತ್ವಿಕ್ Acrylic paint ಬಳಸಿಕೊಂಡು ಚಿತ್ರ ರಚಿಸಿದ್ದಾರೆ.
ಇದು ಕೇವಲ ಕಲ್ಪನೆಯ ಚಿತ್ರವಾಗಿದ್ದು, ಪುಸ್ತಕವೊಂದರಲ್ಲಿ ರಾಣಿ ಅಬ್ಬಕ್ಕ ಹೀಗಿದ್ದರು ಅನ್ನೋದನ್ನ ತಿಳಿದುಕೊಂಡ ಸಾತ್ವಿಕ್, ತನ್ನೂರಿನ ಹೋರಾಟಗಾರ್ತಿಯನ್ನ ಈ ರೀತಿಯಾಗಿ ನೆನಪಿಸಿಕೊಳ್ಳುವಂತೆ ಮಾಡಿದ್ದಾರೆ. ಬಲಗೈಯಲ್ಲಿ ಪಂಜು ಹಿಡಿದು ಕುದುರೆಯನ್ನೇರಿ ಯುದ್ಧ ಸನ್ನದ್ಧಳಾದ ರಾಣಿ ಅಬ್ಬಕ್ಕಳ ಚಿತ್ರ ಇದಾಗಿದೆ, ಸಾತ್ವಿಕ್ ದೇಶದ ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕಳನ್ನ ಸ್ವಾತಂತ್ರ್ಯೋತ್ಸವದ ಸಮಯದಲ್ಲಿ ನೆನಪಿಸಿಕೊಳ್ಳುವ ಮೂಲಕ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯೋರ್ವಳನ್ನ ಮತ್ತೆ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಈ ಹಿಂದೆಯೂ ಇಂತಹ ಹಲವು ಚಿತ್ರಗಳಿಗೆ ಸಾತ್ವಿಕ್ ಜೀವ ತುಂಬಿದ್ದರು.
-ಇರ್ಷಾದ್ ಕಿನ್ನಿಗೋಳಿ