ಶಿವಮೊಗ್ಗ: ದೇಶದ ಸನಾತನ ಕೃಷಿ ಧರ್ಮ, ರೈತ ಸಂಸ್ಕೃತಿಗೆ ಧಕ್ಕೆ ತರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಇಂದು ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರೈತರು ಪ್ರತಿಭಟನೆ ನಡೆಸಿದ್ದಾರೆ.
ಇಂದು ಸ್ವಾತಂತ್ರೋತ್ಸವವನ್ನು, ಕರಾಳ ದಿನಾಚರಣೆಯನ್ನಾಗಿ ಅಚರಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ. ದೇಶಾದ್ಯಂತ ಕೊರೋನಾ ವೈರಸ್ ವ್ಯಾಪಿಸುತ್ತಿರುವ ಸಂದರ್ಭವನ್ನು ದುರುಪಯೋಗಪಡಿಸಿಕೊಂಡಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಹಲವು ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ರೈತರ ಬದುಕನ್ನು ಬೀದಿಗೆ ತಂದು ವಿದೇಶಿ ಬಂಡವಾಳ ಶಾಹಿಗಳಿಗೆ ಕೆಂಪು ಹಾಸನ್ನು ಹಾಸಿವೆ ಎಂದು ಪ್ರತಿಭಟನಾಕಾರ ರೈತರು ಆರೋಪಿಸಿದ್ದಾರೆ.
ಸದ್ಯ ಸರ್ಕಾರ ದೇಶದ ಜನರಿಗೆ ಅನ್ನವನ್ನು ನೀಡಿದ ರೈತರ ಮೇಲೆ ನಿರಂತರವಾಗಿ ಶೋಷಣೆ ಮಾಡುತ್ತಾ ,ರೈತರ ಪರ ಕಾಳಜಿ ಇಲ್ಲದಂತಾಗಿದೆ. ರಾಜ್ಯದಲ್ಲಿ ಕಳೆದ 40 ವರ್ಷಗಳಿಂದ ರೈತರ ನ್ಯಾಯ ಸಮ್ಮತವಾದ ಹಕ್ಕುಗಳಿಗಾಗಿ, ಸಂವಿಧಾನಬದ್ದವಾಗಿ ಹಾಗೂ ಅಹಿಂಸಾತ್ಮಕವಾಗಿ ಹೋರಾಟ ಚಳವಳಿಗಳನ್ನು ಮಾಡುತ್ತಾ ಬಂದಿದ್ದರೂ ಸಹ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ರೈತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿವೆ ಎಂದು ದೂರಿದ್ದು, ಕಾಯ್ದೆಗಳ ತಿದ್ದುಪಡಿ ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ.