ಧಾರವಾಡ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಇವತ್ತು ಧಾರವಾಡದಲ್ಲಿ ದರ್ಶನ ಕೊಟ್ಟರು. ಮಾಜಿ ಸಚಿವ ಹಾಗೂ ಸ್ನೇಹಿತ ವಿನಯ ಕುಲಕರ್ಣಿಯವರ ಡೇರಿಗೆ ಭೇಟಿ ಕೊಟ್ಟ ದರ್ಶನ್ ಕೆಲಕಾಲ ವಿನಯ ಕುಲಕರ್ಣಿ ಜೊತೆ ಚಕ್ಕಡಿ (ಎತ್ತಿನ ಗಾಡಿ) ಸವಾರಿ ನಡೆಸಿದ್ರು. ಆಗಾಗ ಧಾರವಾಡದ ವಿನಯ ಕುಲಕರ್ಣಿ ಹಾಲಿನ ಡೇರಿಗೆ ದರ್ಶನ್ ಬಂದು ಸಮಯ ಕಳೆಯುತ್ತಾರೆ. ಈ ಸಲ ಲಾಕ್ ಡೌನ್ ನಿಂದಾಗಿ ಎಲ್ಲ ಶೂಟಿಂಗ್ ಕೆಲಸ ಕಾರ್ಯಗಳು ನಿಂತು ಹೋದ ಪರಿಣಾಮ ಸಮಯ ಕಳೆಯಲು ಧಾರವಾಡಕ್ಕೆ ಆಗಮಿಸಿದ್ದಾರೆ. ಬೆಳಗಿನ ಜಾವ ಧಾರವಾಡಕ್ಕೆ ಬಂದಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡೇರಿಯಲ್ಲಿ ಕುದುರೆ ಸವಾರಿಯನ್ನು ಸಹ ನಡೆಸಿದರು ಎನ್ನಲಾಗಿದೆ. ಸುಮಾರು ಒಂದು ಘಂಟೆಗಳ ಕಾಲ ಮನ್ಸೂರ ಗ್ರಾಮದ ಕಚ್ಚಾ ರಸ್ತೆಯಲ್ಲಿ ಚಕ್ಕಡಿ ಓಡಿಸಿದ ದರ್ಶನ್ ಖುಷಿ ಪಟ್ಟರು. ದರ್ಶನ್ ಧಾರವಾಡಕ್ಕೆ ಬಂದಾಗಲೆಲ್ಲಾ ವಿನಯ ಕುಲಕರ್ಣಿ ಡೇರಿಯಿಂದ ಆಕಳುಗಳನ್ನು ತೆಗೆದುಕೊಂಡು ಹೋಗುತ್ತಿದ್ದು, ಬೆಂಗಳೂರು ಬಳಿ ಚಿತ್ರನಟ ದರ್ಶನ್ ಡೇರಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ವಿನಯ ಕುಲಕರ್ಣಿ ಡೇರಿಗೆ ದರ್ಶನ್ ಸಾಕಿದ್ದ ಮೂರು ಕುದುರೆಗಳು ಬಂದಿವೆ. ಹೀಗಾಗಿ ಧಾರವಾಡಕ್ಕೆ ಆಗಾಗ ಭೇಟಿ ನೀಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿನಯ ಕುಲಕರ್ಣಿ ಡೇರಿಗೆ ಬಂದು ಕಾಲ ಕಳೆಯುತ್ತಾರೆ.