ಚಿಕ್ಕಮಗಳೂರು : ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾವು ಗಲಭೆಯನ್ನ ಸಹಿಸುವುದಿಲ್ಲ. ಬೆಂಗಳೂರು ಗಲಭೆಗೆ ಯಾರೇ ಕಾರಣಕರ್ತರಾದರೂ ಸೂಕ್ತ ಕ್ರಮಕೈಗೊಳ್ಳಬೇಕು, ಸರ್ಕಾರಕ್ಕೆ ನಮ್ಮ ಬೆಂಬಲವಿದೆ ಎಂದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ಮಾತನಾಡಿದ ಅವರು, ಈ ಘಟನೆಯನ್ನ ಅತ್ಯಂತ ಕಠಿಣ ಹಾಗೂ ತೀವ್ರ ಪದಗಳಿಂದ ಖಂಡಿಸುತ್ತೇನೆ. ಯಾವುದೇ ಜಾತಿ-ಧರ್ಮ ಇರುಬಹುದು. ಯಾವುದೇ ಧಾರ್ಮಿಕ ನಂಬಿಕೆ ಹಾಗೂ ಗುರುಗಳ ಮೇಲೆ ಹಗುರುವಾದ ಹೇಳಿಕೆಗಳನ್ನ ಕೊಡುವುದನ್ನ ಮೊದಲು ಎಲ್ಲಾ ಸಮುದಾಯದವರು ನಿಲ್ಲಿಸಬೇಕು. ಎಲ್ಲರೂ ಈ ರೀತಿಯ ಹೇಳಿಕೆಗಳನ್ನ ಕೊಡುವುದನ್ನ ನಿಲ್ಲಿಸಿದಾಗ ಈ ರೀತಿಯ ಭಾವನಾತ್ಮಕ ಘಟನೆಗಳು ನಡೆಯುವುದಿಲ್ಲ. ಈ ಘಟನೆ ತಪ್ಪು. ನ್ಯಾಯ ಕೇಳಲು ಕೋರ್ಟ್, ಕಾನೂನು, ಪೊಲೀಸ್ ಎಲ್ಲಾ ವ್ಯವಸ್ಥೆ ಇದೆ. ದೂರು ನೀಡಿ ನ್ಯಾಯ ಕೇಳಬೇಕು. ಈ ರೀತಿ ದೌರ್ಜನ್ಯ, ಗಲಭೆ ಒಳ್ಳೆಯದಲ್ಲ ಇದನ್ನ ಯಾರೂ ಸಹಿಸಲ್ಲ ಎಂದು ಘಟನೆ ಕುರಿತು ಆಕ್ರೋಶ ಹೊರಹಾಕಿದ್ದಾರೆ. ಈ ರೀತಿ ದಾಂದಲೆಯನ್ನ ಯಾರೂ ಒಪ್ಪುವುದಿಲ್ಲ. ಯಾರೋ ಶಾಸಕರ ಸಂಬಂಧಿ ಏನೋ ಹೇಳಿಕೆ ಕೊಟ್ಟನೆಂದು ಆ ರೀತಿ ದಾಂದಲೆ ತರವಲ್ಲ ಎಂದು ಗಲಭೆಕೋರರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಘಟನೆ ಕುರಿತು ಸರ್ಕಾರ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ಅದೇ ರೀತಿ ಹೇಳಿಕೆ ಕೊಟ್ಟವನ ಮೇಲೂ ಕ್ರಮವಾಗಬೇಕು ಎಂದಿದ್ದಾರೆ. ಇಂತಹಾ ಘಟನೆಯಲ್ಲಿ ಅಮಾಯಕರಿಗೆ ಒಡೆತ ಬೀಳುತ್ತೆ. ಆದ್ದರಿಂದ ಗಲಭೆಗೆ ಕಾರಣಕರ್ತರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು. ಅದೇ ರೀತಿ, ಬೇರೆ ಸಮುದಾಯದ ಗುರು ಅಥವ ದೇವರು ಏನೇ ಇರಬಹುದು. ಅದರ ಮೇಲೆ ಅವಹೇಳನಕಾರಿ ಹೇಳಿಕೆ ನೀಡದ ವ್ಯಕ್ತಿ ಮೇಲೂ ಸೂಕ್ತ ಕ್ರಮವಾಗಬೇಕು. ಆಗ ಮಾತ್ರ ಮುಂದೆ ಈ ರೀತಿಯ ಘಟನೆಗಳು ಆಗುವುದಿಲ್ಲ ಎಂದಿದ್ದಾರೆ…