ಗದಗ : ಆ ಬಾಲಕಿಗೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಪಾರ್ಶ್ವವಾಯುವಿನಿಂದ ಹಾಸಿಗೆ ಹಿಡಿದ ತಂದೆ. ಬಾಲ್ಯದಲ್ಲೇ ತಾಯಿಯನ್ನ ಕಳೆದುಕೊಂಡ ಆಕೆಗೆ ಅನಾಥ ಪ್ರಜ್ಞೆ ಬೇರೆ. ಆದರೆ ಇಷ್ಟೆಲ್ಲ ಕಷ್ಟಗಳ ಮಧ್ಯೆಯೂ ಆ ಬಾಲಕಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ. ಕಷ್ಟಗಳ ಮಧ್ಯೆಯೂ ಸಾಧನೆ ಮಾಡಿ ತೋರಿಸಿದ್ದಾಳೆ.
ಸಾಧಿಸೋ ಮನಸ್ಸಿದ್ರೆ ಏನು ಬೇಕಾದ್ರೂ ಮಾಡಬಹದು. ಎಂತಹದೇ ಕಷ್ಟ ಬಂದ್ರೂ ಧೈರ್ಯವಾಗಿ ಎದುರಿಸಬಹುದು ಅನ್ನೋದಕ್ಕೆ ಮುದ್ರಣ ಕಾಶಿ ಗದಗ ನಗರದ ಈ ಕುವರಿಯೇ ಸಾಕ್ಷಿ. ಹೌದು… ನಗರದ ತೋಂಟದಾರ್ಯ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಓಂಕಾರಿ ಕಲಾಲ್ ಹತ್ತನೇ ಪರೀಕ್ಷೆಯಲ್ಲಿ ಒಟ್ಟು 568 ಅಂಕಗಳನ್ನ ಪಡೆದಿದ್ದಾಳೆ. ಶೇ 90.80 ರಷ್ಟು ಫಲಿತಾಂಶ ಸಾಧಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ. ವಿದ್ಯಾರ್ಥಿನಿ ಓಂಕಾರಿ ಕುಟುಂಬ ದಿನವಿಡಿ ಕಷ್ಟದಲ್ಲಿಯೇ ಜೀವನ ಸಾಗಿಸ್ತಿದೆ. ಈಕೆ 2 ವರ್ಷವಿದ್ದಾಗಲೇ ತಾಯಿ ವಿಧಿವಶರಾಗಿದ್ದಾರೆ. ಇನ್ನು ವೃತ್ತಿಯಲ್ಲಿ ಟೈಲರ್ ಆಗಿದ್ದ ತಂದೆ ಮಾರುತಿ ಕಲಾಲ್ ಅವರ ಆರೈಕೆಯಲ್ಲಿಯೇ ಓಂಕಾರಿ ಬೆಳೆದಿದ್ದಾಳೆ. ಆದರೆ ಅದಾವ ವಿಧಿಯಾಟವೋ.. ತಾಯಿ ಕಳೆದುಕೊಂಡಿದ್ದ ಓಂಕಾರಿಗೆ ಒಂಬತ್ತನೆ ಕ್ಲಾಸ್ ಓದುವಾಗ ತಂದೆಗೂ ಪಾರ್ಶ್ವವಾಯು ಉಂಟಾಗಿ ಹಾಸಿಗೆ ಹಿಡಿದಿದ್ದಾರೆ. ಇದ್ರಿಂದ ಕಂಗೆಟ್ಟಿದ್ದ ವಿದ್ಯಾರ್ಥಿನಿ ವಾರಗಟ್ಟಲೆ ಶಾಲೆ ಬಿಟ್ಟು ಮತ್ತೊಬ್ಬರ ಮನೆಗಳಿಗೆ ಪಾತ್ರೆ ತೊಳೆಯೋಕೆ ತೆರಳಿದ್ದಳಂತೆ. ಆದರೆ ಪ್ರತಿಭಾನ್ವಿತ ವಿದ್ಯಾರ್ಥಿನಿ ಗೈರು ಹಾಜರಿ ಬಗ್ಗೆ ಗಮನಿಸಿದ ಶಾಲಾ ಶಿಕ್ಷಕರು ಈಕೆ ಸಹಪಾಠಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ನಂತರ ಓಂಕಾರಿಗೆ ಉಚಿತ ಶಿಕ್ಷಣ ಜವಾಬ್ದಾರಿ ತೆಗೆದುಕೊಂಡ ಶಾಲಾ ಆಡಳಿತ ಮಂಡಳಿ ಈಕೆ ಕುಟುಂಬಕ್ಕೂ ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದಿದ್ರು. ಇಂದು ಆ ಮಾನವೀಯತೆಗೆ ತಕ್ಕ ಸಾರ್ಥಕತೆ ತಂದುಕೊಟ್ಟಿದ್ದಾಳೆ ಓಂಕಾರಿ.
ಇನ್ನು ಶಾಲಾ ಶಿಕ್ಷಕವರ್ಗ ಓಂಕಾರಿ ಸ್ನೇಹಿತೆಯರಿಗೆ ಈಕೆ ಬಡತನದ ಕುರಿತು ಮನವರಿಕೆ ಮಾಡಿದ್ರು. ಪರಿಣಾಮ ಸ್ನೇಹಿತೆಯರೆಲ್ರೂ ತಮ್ಮ ಪೋಷಕರಿಂದ 30 ಸಾವಿರ ರೂ ಹಣ ಸಂಗ್ರಹಿಸಿ ಶಿಕ್ಷಕರ ಮೂಲಕ ಓಂಕಾರಿ ತಂದೆಗೆ ಹಸ್ತಾಂತರಿಸಿ ಮಾನವೀಯತೆಗೆ ಸಾಕ್ಷಿಯಾಗಿದ್ರು. ಜೊತೆಗೆ ಹಲವು ದಾನಿಗಳು ವಿದ್ಯಾರ್ಥಿನಿ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ ಚಾಚಿದ್ದಾರೆ. ಇನ್ನು ತಂದೆ ಅನಾರೋಗ್ಯದ ಬಳಿಕ ಮನೆ ಬಾಡಿಗೆ 1400 ರೂ ಕಟ್ಟಲೂ ಸಹ ಕೆಲವೊಮ್ಮೆ ಕಷ್ಟವಾಗ್ತಿದ್ದ ಓಂಕಾರಿ ಬಿಡುವಿನ ವೇಳೆಯಲ್ಲಿ ಅಗರಬತ್ತಿ ಮಾಡೋದನ್ನ ರೂಢಿಸಿಕೊಂಡಿದ್ಲು. ದಿನಕ್ಕೆ 100 ಗಳಿಸಿ ಮನೆ ಖರ್ಚಿಗೆ ಬಳಸುತ್ತಿದ್ದಳು. ಪರೀಕ್ಷೆ ಸಮೀಪವಿದ್ರೂ ಕಳೆದ ಲಾಕ್ಡೌನ್ ವೇಳೆ ಓಂಕಾರಿ ಅಗರಬತ್ತಿ ಕೆಲಸ ಮಾಡಿಕೊಂಡೇ ದಿನಕ್ಕೆ 100 ಗಳಿಸುತ್ತಿದ್ದಳು. ಛಲ ಬಿಡದೇ ಹಗಲಿರುಳು ಓದಿರೋ ಓಂಕಾರಿ ನಿನ್ನೆ ಬಂದ ಹತ್ತನೇ ತರಗತಿ ಪರೀಕ್ಷೆ ಫಲಿತಾಂಶದಲ್ಲಿ ಉನ್ನತ ಸಾಧನೆ ಮಾಡಿರೋದು ಶಾಲೆಗೆ ಹಾಗೂ ಸ್ಥಳಿಯರಿಗೆ ತುಂಬಲಾರದ ಸಂತೋಷ ತಂದಿದೆ.
ಅದೆಷ್ಟೋ ಮಕ್ಕಳಿಗೆ ಎಲ್ಲ ರೀತಿಯ ಅನುಕೂಲತೆಗಳಿದ್ರೂ ಸಾಧಿಸೋ ಮನಸ್ಸು ಇಲ್ಲದೇ ತಮ್ಮ ವಿದ್ಯಾಭ್ಯಾಸದಲ್ಲಿ ಹಿಂದೆ ಬೀಳೋದು ಸರ್ವೇ ಸಾಮಾನ್ಯ.ಆದರೆ ತುತ್ತು ಅನ್ನಕ್ಕೂ ಪರದಾಡೋ ಕುಟುಂಬದಲ್ಲಿ ಜನಿಸಿರೋ ಓಂಕಾರಿ ಮನೆ ಯಜಮಾನಿ ಆಗಿಯೋ ಸೈ ಎನಿಸಿಕೊಂಡು
ಇತ್ತ ವಿದ್ಯಾಭ್ಯಾಸದಲ್ಲಿಯೂ ಕೀರ್ತಿಪತಾಕೆ ಹಾರಿಸಿದ್ದಾಳೆ.
ಮುಂದೆ ಐಎಎಸ್ ಮಾಡೋ ಕನಸು ಹೊಂದಿರೋ ಓಂಕಾರಿಗೆ ಸಹೃದಯಿಗಳ ನೆರವಿನ ಹಸ್ತ ಬೇಕಾಗಿದೆ.
ಮಹಾಲಿಂಗೇಶ್ ಹಿರೇಮಠ