ಶಿವಮೊಗ್ಗ : ಅತಿವೃಷ್ಟಿಯಿಂದ ಬೆಳೆಹಾನಿಯಾಗಿರುವ ಬಗ್ಗೆ ಮತ್ತು ಪ್ರವಾಹ ಪರಿಸ್ಥಿತಿ ಎದುರಿಸಲು ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂದು ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ್ ಪ್ರತಿಭಟನೆ ನಡೆಸಿದ್ದಾರೆ. ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಮಾಜಿ ಎಂ.ಎಲ್.ಎ ಶಾರದಾ ಪೂರ್ಯಾನಾಯ್ಕ್, ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ, ರೈತರ ಬೆಳೆಗಳು ಮಳೆಗೆ ನಾಶವಾಗಿವೆ, ಮೆಕ್ಕೆಜೋಳ, ಬಾಳೆ, ತರಕಾರಿ, ಅಡಿಕೆ ಮುಂತಾದ ಬೆಳೆಗಳು ಭಾರೀ ಮಳೆಗೆ ಕೊಚ್ಚಿ ಹೋಗಿವೆ. ಗಾಳಿಗೆ ಬಹಳಷ್ಟು ಬೆಳೆ ಹಾನಿಯಾಗಿವೆ. ರೈತರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆಪಾದಿಸಿದ್ದಾರೆ. ಅದರಲ್ಲೂ ಗ್ರಾಮಾಂತರ ಕ್ಷೇತ್ರ ತುಂಬಾ ವಿಸ್ತಾರವಾಗಿದ್ದು, ಇಲ್ಲಿ ಹೆಚ್ಚಿನ ಹಾನಿಯಾಗಿದೆ. ಬಹಳಷ್ಟು ಗ್ರಾಮಗಳಿಗೆ ನದಿ ನೀರು ನುಗ್ಗಿದೆ. ತುಂಗಭದ್ರಾ ನದಿಗಳು ಅಪಾಯದ ಮಟ್ಟ ಮೀರಿ ಹರಿದು, ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಸರ್ಕಾರ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.