ಹುಬ್ಬಳ್ಳಿ : ಕೊರೋನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಅವರ ಸಮುದಾಯದ ನಾಯಕರೇ ಅಡ್ಡಿಯನ್ನುಂಟು ಮಾಡಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಳೆದ ಒಂದು ವಾರದ ಹಿಂದೆ ಹುಬ್ಬಳ್ಳಿಯ ರೈಲ್ವೆ ಆಸ್ಪತ್ರೆಗೆ ದಾಖಲಾಗಿದ್ದ ಮಂಟೂರು ರಸ್ತೆ ನಿವಾಸಿ ನೀರೆಲ್ಲಾ ಸುಲೋಮನ್ (85) ಕೊರೋನಾದಿಂದ ಮೃತಪಟ್ಟಿದ್ದಾರೆ.
ಆದ್ರೆ ಇವರ ಅಂತ್ಯಸಂಸ್ಕಾರ ಸ್ಮಶಾನದಲ್ಲಿ ಮಾಡಲು ಕ್ರೈಸ್ತ ಸಮುದಾಯದ ಕೆಲ ಹಿರಿಯರು ಅಡ್ಡಿ ಪಡಿಸಿದ್ದಾರೆ. ಹೀಗಾಗಿ ಆಸ್ಪತ್ರೆಯಲ್ಲಿ ಮೃತದೇಹಕ್ಕಾಗಿ ಸಂಬಂಧಿಗಳು ಹಾಗೂ ಸ್ನೇಹಿತರು ಕಾಯ್ದುಕುಳಿತಿದ್ದಾರೆ.
ಕ್ರಿಶ್ಚಿಯನ್ ಸ್ಮಶಾನದಲ್ಲಿ ಫಾದರ್ ಅವರ ಅಂತ್ಯಕ್ರಿಯೆ ಮಾಡಲು ತಮ್ಮ ಸಮುದಾಯದ ಹಿರಿಯರೇ ಬಿಡುತ್ತಿಲ್ಲ ಎಂದು ಸಮುದಾಯದ ಕೆಲವರು ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.
ಮುಸ್ಲಿಂ ಹಾಗೂ ಹಿಂದೂಗಳಿಗೆ ಅವರವರ ರುದ್ರಭೂಮಿಗಳಲ್ಲಿ ಅಂತ್ಯಕ್ರಿಯೆ ಮಾಡಲು ಅವರವರ ಸಮುದಾಯದ ಮುಖಂಡರು ಅನುವು ಮಾಡಿಕೊಟ್ಟಿದ್ದಾರೆ. ಆದ್ರೆ ನಮ್ಮ ಸಮುದಾಯದವರೆ ನಮಗೆ ಅಂತ್ಯಕ್ರಿಯೆ ಮಾಡಲು ಕೊಡುತ್ತಿಲ್ಲ. ಹೀಗಾಗಿ ನಮಗೆ ನ್ಯಾಯ ಕೊಡಬೇಕು ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ.